ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೇಂದ್ರದ ಗೊರಕೆ; ಅಡಕೆ ಬೆಳೆಗಾರರ ಎಚ್ಚರಿಕೆ

Lingaraj Badiger
Updated On : 4 Apr 2013, 10:51 am

ಬೆಂಗಳೂರು: ಹಳದಿ ಎಲೆಯ ರೋಗದಿಂದ ಕಂಗೆಟ್ಟಿರುವ ಅಡಕೆ ಬೆಳೆಗಾರರಿಗೆ ಅನುಕೂಲವಾಗುವ ಗೋರಕ್ ಸಿಂಗ್ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಮೀನಮೇಷ ಎಣಿಸುತ್ತಿರುವ ಕೇಂದ್ರ ಸರ್ಕಾರಕ್ಕೀಗ ನ್ಯಾಯಾಂಗ ನಿಂದನೆ ಭೀತಿ ಎದುರಾಗಿದೆ.
ಮೂರು ತಿಂಗಳಲ್ಲಿ 10 ಎಕರೆಗೂ ಕಡಿಮೆ ಜಮೀನು ಹೊಂದಿರುವ ಅಡಕೆ ಬೆಳೆಗಾರರ ಸಾಲ ಮನ್ನಾ ಪ್ರಸ್ತಾವನೆಯನ್ನು ಮೂರು ತಿಂಗಳಲ್ಲಿ ಜಾರಿಗೆ ತರುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು  ಪಾಲಿಸದ ಸರ್ಕಾರದ ವಿರುದ್ಧ ಸಚಿನ್ ಮೀಗಾ ಎಂಬುವರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ.
ರೈತರಿಗೆ ಉಪಯುಕ್ತವಾಗುವ ವರದಿ, ಯೋಜನೆಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ಆಮೆ ವೇಗ ಅನುಸರಿಸುತ್ತಿದೆ ಎಂದು ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡ ನಂತರವೂ ಕೇಂದ್ರ ಸರ್ಕಾರ ಆದೇಶವನ್ನು ಜಾರಿಗೆ ತರುವತ್ತ ಗಮನ ಹರಿಸಿಲ್ಲ. ಈ ಸಂಬಂಧ ತಾವು ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವುದಾಗಿ ನೋಟಿಸ್ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಅರ್ಜಿ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಆದೇಶವೇನಿತ್ತು?: ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿನ ರೈತರ ಸ್ಥಿತಿಗತಿಯ ಕುರಿತು ಅದ್ಯಯನ ನಡೆಸಿ, ಬೆಳೆ ಹಾನಿಯಿಂದ ಶೋಚನೀಯ ಸ್ಥಿತಿಯಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು ಎಂದು ಅಗ್ರಹಿಸಿ ಗೋರಕ್ ಸಿಂಗ್ ನೀಡಿದ್ದ ವರದಿಯನ್ನು ಕೂಡ ಇಲ್ಲಿಯವರೆಗೆ ಜಾರಿಗೆ ತಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದ ಹಿಂದಿನ ನ್ಯಾ.ವಿ.ಜೆ.ಸೇನ್ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಮೂರು ತಿಂಗಳಲ್ಲಿ ಈ ವರದಿಯಲ್ಲಿನ ಶಿಫಾರಸು ಹಾಗೂ ಯೋಜನೆಗಳನ್ನು ಜಾರಿಗೆ ತರುವಂತೆ 2012ರ ಸೆಪ್ಟೆಂಬರ್ 25ರಂದು ಆದೇಶಿಸಿತ್ತು.
ಸಾಲ ಮನ್ನಾ ಕೋರಿ ಅರ್ಜಿ: ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಡುತ್ತಿರುವ ಹಳದಿ ರೋಗ, ಬೇರು ರೋಗ ಹಾಗೂ ಕೊಳೆ ರೋಗಗಳಿಂದ ಅಡಕೆ ಬೆಳೆಗಾರರ ಆದಾಯ ವಾರ್ಷಿಕ ರು. 50 ಸಾವಿರದಿಂದ ರು. 5 ಸಾವಿರಕ್ಕಿಳಿದಿದೆ. ಅಂದರೆ, ಶೇಕಡಾವಾರು ಆದಾಯದಲ್ಲಿ ಹತ್ತು ಪಟ್ಟು ಇಳಿಮುಖ ಕಂಡುಬಂದಿದೆ. ಇದರಿಂದ 4 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಸಾಲ ಮರುಪಾವತಿ ಮಾಡಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಇದನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ 2012ರ ಜನವರಿ 13ರಂದು 'ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಅಡಕೆ ಬೆಳೆಗಾರರ ಪುನಶ್ಚೇತನ ಹಾಗೂ ಇಳುವರಿ ಹೆಚ್ಚಳ' ಯೋಜನೆಯನ್ನು ಜಾರಿಗೆ ತಂದಿದೆ. ಇದರ ಜಾರಿಯ ಜವಾಬ್ದಾರಿಯನ್ನು ನಬಾರ್ಡ್ ಹಾಗೂ ರಾಜ್ಯದ ಎಸ್‌ಎಲ್‌ಬಿಸಿ ಕನ್ವೇನರ್ ಬ್ಯಾಂಕ್ ಸೇರಿದಂತೆ ಇತರ ಬ್ಯಾಂಕ್‌ಗಳಿಗೆ ವಹಿಸಲಾಗಿದೆ. ಆದರೆ, ಇಲ್ಲಿಯವರೆಗೆ ಅದು ಜಾರಿಗೆ ಬಂದಿಲ್ಲ.
ಇಲ್ಲಿಯವರೆಗೆ ಮೂರು ಜಿಲ್ಲೆಗಳಲ್ಲಿ ಒಟ್ಟು 42 ಸಾವಿರ ಹೆಕ್ಟೇರ್ ಪ್ರದೇಶಗಳು ಕೊಳೆ ಹಾಗೂ ಹಳದಿ ರೋಗದಿಂದ ನಾಶವಾಗಿವೆ. ಇದರಿಂದ ಅಡಕೆ ಬೆಳೆಯನ್ನೇ ನಂಬಿದ್ದ ರೈತರು ಬೀದಿ ಪಾಲಾಗಿದ್ದಾರೆ. ಜಮೀನು ರಕ್ಷಿಸಿಕೊಳ್ಳುವ ಸಲುವಾಗಿ ಮಾಡಿದ್ದ ಸಾಲವನ್ನು ಮರುಪಾವತಿ ಮಾಡಲಾಗದ ಪರಿಸ್ಥಿತಿಗೆ ಸಿಲುಕಿದ್ದಾರೆ. ಅನೇಕರು ಸಾಲ ಭಾದೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಆದ್ದರಿಂದ ತಕ್ಷಣ ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಪರವಾಗಿ ನೀಡಿರುವ ವರದಿಯ ಶಿಫಾರಸುಗಳನ್ನು ಜಾರಿಗೆ ತಂದು ಸಾಲಮನ್ನಾ ಮಾಡಬೇಕು ಎಂದು ಮಲೆನಾಡು ಸಂಘರ್ಷ ಕ್ರಿಯಾ ಹೋರಾಟ ಸಮಿತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ನೀರೋ ದೊರೆಯಂತಹ ಇಲಾಖೆಗಳು
ರೋಮ್ ನಗರ ಹೊತ್ತಿ ಉರಿಯುವಾಗ ನೀರೋ ದೊರೆ ಪಿಟೀಲು ಬಾರಿಸುತ್ತಿದ್ದ ಎಂಬ ಹೇಳಿಕೆಗೆ ತಕ್ಕಂತೆ ನಮ್ಮ ಸರ್ಕಾರಿ ಇಲಾಖೆಗಳು ಕೆಲಸ ನಿರ್ವಹಿಸುತ್ತಿವೆ. ಬೆಳೆ ಹಾನಿಯಿಂದ ರೈತರು ಸಾವಿನ ಮನೆಯತ್ತ ಮುಖ ಮಾಡುತ್ತಿದ್ದರೆ, ಇಲಾಖೆಗಳು ಕೇವಲ ಭರವಸೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೈಗಾರಿಕೆಗಳು ನಷ್ಟಕ್ಕೊಳಗಾದಾಗ ವಿಶಾಲ ಮನಸ್ಸಿನಿಂದ ಪರಿಹಾರ ನೀಡುವ ಸರ್ಕಾರ ರೈತರ ಸಂಕಷ್ಟಗಳಿಗೆ ಮಾತ್ರ ಕಣ್ಣು ಮುಚ್ಚಿಕೊಂಡಿರುತ್ತದೆ ಎಂದು ಪೀಠ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
-ಸುಪ್ರೀತಾ ಹೆಬ್ಬಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement