ನಾಳೆ ವಿವಿಧ ತಳಿಗಳ ಗೋಶಾಲೆಗೆ ಶಂಕುಸ್ಥಾಪನೆ
ಶಿವಮೊಗ್ಗ: ಸಾಗರ ತಾಲೂಕಿನ ಹೊಸಗುಂದದ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ದೇಶದ ನಾನಾ ರಾಜ್ಯಗಳ ವಿವಿಧ ಗೋತಳಿಗಳ ಭಂಡಾರವಾಗುವ ಗೋಶಾಲೆಗೆ ಏ.5ರಂದು ಶಂಕುಸ್ಥಾಪನೆ ನೆರವೇರಲಿದೆ.
4ರಂದು ಶೃಂಗೇರಿ ದಕ್ಷಿಣಾಮ್ನಾಯ ಶಾರದಾಪೀಠಾಧೀಶ್ವರ ಭಾರತೀತೀರ್ಥ ಸ್ವಾಮೀಜಿ ಆಗಮಿಸಲಿದ್ದು, ಶ್ರೀಗಳಿಂದ ರಾತ್ರಿ 8ಗಂಟೆಗೆ ಶ್ರೀ ಶಾರದಾ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ. 5ರಂದು ಶ್ರೀಗಳು ಗೋಶಾಲೆಗೆ ಶಂಕುಸ್ಥಾಪನೆ ನೆರವೇರಿಸುವರು.
ಧ್ವನಿಸುರುಳಿ ಬಿಡುಗಡೆ: ಇದೇ ವೇಳೆ ಹೊಸಗುಂದದ ಶ್ರೀ ಉಮಾಮಹೇಶ್ವರ ದೇವಾಲಯಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರದ ವಿವಿಧ ಹಂತಗಳ ಸಮಗ್ರ ಮಾಹಿತಿಯುಳ್ಳ ಕಿರುಹೊತ್ತಿಗೆ ಹಾಗೂ ಮಹೇಶ್ವರನ ಮಹಿಮೆಯುಳ್ಳ ಧ್ವನಿಸುರುಳಿಯನ್ನು ಬಿಡುಗಡೆ ಮಾಡಲಾಗುವುದು. ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯ, ಎಂ.ಡಿ. ಪಲ್ಲವಿ, ಸಹಾನಾ ಜಿ. ಭಟ್ ಅವರ ಕಂಠದಲ್ಲಿ ಧ್ವನಿಸುರಳಿ ಮೂಡಿಬಂದಿದ್ದು, ಚಿನ್ಮಯ ಎಂ.ರಾವ್ ಹೊನಗೋಡು ಸಂಗೀತ ನೀಡಿದ್ದು, ದೀಪಕ್ ಸಾಗರ್ ಸಾಹಿತ್ಯ ರಚಿಸಿದ್ದಾರೆ.
ಸಮಾರಂಭದಲ್ಲಿ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಸ್ಥಾಪಕ ಸಿ.ಎಂ.ಎನ್. ಶಾಸ್ತ್ರಿ, ಶೋಭಾ ಎನ್. ಶಾಸ್ತ್ರಿ, ಶೃಂಗೇರಿ ದಕ್ಷಿಣಾಮ್ನಾಯ ಶಾರದಾಪೀಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರಿಶಂಕರ್ ಮತ್ತಿತರರು ಪಾಲ್ಗೊಳ್ಳುವರು.
ಹೊಸಗುಂದದ ವಿಶೇಷತೆ: ಮಲೆನಾಡಿನ ಪ್ರಕೃತಿಯ ಸೌಂದರ್ಯದ ನಡುವೆ ಇರುವ ಹೊಸಗುಂದ, ಹೊಂಬುಜದ ಶ್ರೀ ಬಿಲೇಶ್ವರ ದೇವರ ಪಾದಪದ್ಮಾರಾಧಕರೆಂದು ಗುರುತಿಸಿಕೊಂಡ ರಾಜವಂಶಸ್ಥರು ಸುಮಾರು 300 ವರ್ಷ ಹೊಸಗುಂದವನ್ನು ರಾಜಧಾನಿಯಾಗಿ ಮಾಡಿ, ರಾಜ್ಯಭಾರ ಮಾಡಿರುವುದನ್ನು ಇಲ್ಲಿಯ ಶಿಲಾಶಾಸನಗಳು ಹೇಳುತ್ತವೆ.
ಆ ಕಾಲದಲ್ಲಿ ಹೊಸಗುಂದದ ಅರಸರು ಹಲವಾರು ದೇವಾಲಯಗಳನ್ನು ಕಟ್ಟಿರುವುದರಲ್ಲದೆ ನಾನಾ ರೀತಿಯ ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡಿರುವುದು ಚರಿತ್ರೆಯಲ್ಲಿ ದಾಖಲಾಗಿವೆ. ಈ ರಾಜವಂಶದ ಪೀಳಿಗೆ ಸುಮಾರು 650 ವರ್ಷಗಳ ಹಿಂದೆ ಪತನಗೊಂಡು, ಇಲ್ಲಿರುವ ಎಲ್ಲಾ ದೇವಾಲಯಗಳು ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಊರಿಗೆ ಊರೇ ಕಾಡಾಗಿ ಪರಿವರ್ತನೆಗೊಂಡಿತ್ತು.
ಈ ವೇಳೆ ಆಗಮ ಶಾಸ್ತ್ರಜ್ಞ ಸ್ಮರಣೀಯ ಕಟ್ಟೆ ಪರಮೇಶ್ವರ ಭಟ್ಟರು ಹೊಸಗುಂದಕ್ಕೆ ಆಗಮಿಸಿ ಸಿಎಂಎನ್. ಶಾಸ್ತ್ರಿ ದಂಪತಿಗಳಿಗೆ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ನರ್ಮದಾ ಬಾಣಲಿಂಗವನ್ನು ಪ್ರತಿಷ್ಠಾಪಿಸಲು ಸೂಚಿಸಿದ್ದರು. ಇದು ಹೊಸಗುಂದದ ಪುನರ್ ನಿರ್ಮಾಣಕ್ಕೆ ನಾಂದಿಯಾಯಿತು.
ತದನಂತರ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಜ್ಯೋತಿಷ್ಯ ಶಾಸ್ತ್ರದ ಅಷ್ಟಮಂಗಲ ಚಿಂತನೆ ಹಾಗೂ ಪರಿಹಾರ ಕಾರ್ಯಗಳನ್ನು ನಡೆಸಿ ಉಮಾಮಹೇಶ್ವರ ದೇವಾಲಯದ ಜತೆಗೆ ಹೊಸಗುಂದದ ಕಾಡಿನಲ್ಲಿ ಅನಾಥವಾಗಿ ಲಭ್ಯವಾದ ಶ್ರೀ ಕಂಚಿಕಾಳಮ್ಮ, ಶ್ರೀ ಪ್ರಸನ್ನ ನಾರಾಯಣ, ಶ್ರೀ ಲಕ್ಷ್ಮೀಗಣಪತಿ, ಶ್ರೀ ವೀರಭದ್ರ, ಶ್ರೀ ಮಹಿಷಮರ್ದಿನಿ ಆದಿಯಾಗಿ ಎಲ್ಲಾ ಸಾನ್ನಿಧ್ಯಗಳನ್ನು ಬಾಲಾಲಯದಲ್ಲಿ ಸ್ಥಾಪಿಸಿ ನಿತ್ಯಪೂಜೆಗೆ ವ್ಯವಸ್ಥೆ ಮಾಡಲಾಯಿತು. ಅಂದಿನಿಂದ ಈ ದೇವಾಲಯ ನಗರಿಯ ಪುನನಿರ್ಮಾಣ ಕಾರ್ಯಗಳು ನಡೆಯುತ್ತಾ ಬಂದಿವೆ.
ಈ ಜೀರ್ಣೋದ್ಧಾರ ಕಾರ್ಯಗಳು ಇನ್ನೂ ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಶೃಂಗೇರಿ ದಕ್ಷಿಣಾಮಾಮ್ನಾಯ ಶಾರದಾಪೀಠಾಧೀಶ್ವರ ಭಾರತೀತೀರ್ಥ ಸ್ವಾಮೀಜಿಯವರು ಮಾರ್ಗದರ್ಶನ -ಸಹಾಯಹಸ್ತ ನೀಡುತ್ತಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.