ವರದಕ್ಷಿಣೆ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.3
ವರದಕ್ಷಿಣೆಗಾಗಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗಳಿಗೆ ನಗರದ ತ್ವರಿತ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
2011ರ ಸೆ.28ರಂದು ಬೀರೂರಿನ ಬಳ್ಳಾರಿ ವಾಸಿಗಳಾದ ಮಹಮದ್ ಅಪ್ಸರ್ ಹಾಗೂ ಅವನ ತಾಯಿ ಶಂಷಾದ್ ಸೇರಿ ಮದುವೆ ಸಮಯದಲ್ಲಿ ವರದಕ್ಷಿಣೆ ಪಡೆದಿದ್ದರು. ಹೆಚ್ಚು ವರದಕ್ಷಿಣೆ ಕೊಟ್ಟಿಲ್ಲ, ಇನ್ನು ರು. 25 ಸಾವಿರ ಹಾಗೂ 15 ಗ್ರಾಂ. ಚಿನ್ನದ ಚೈನನ್ನು ತೆಗೆದುಕೊಂಡು ಬರಬೇಕೆಂದು ಅನೇಕ ದಿನಗಳಿಂದ ಹಿಂಸೆ ನೀಡುವ ದರೊಂದಿಗೆ ನಾಜೀನ್ಳ ಕುತ್ತಿಗೆಯನ್ನು ವೇಲ್ನಿಂದ ಬಿಗಿದು ಕೊಲೆ ಮಾಡಿದ್ದರು. ಬೀರೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಅಮರನಾರಾಯಣ ತೀರ್ಪು ನೀಡಿದ್ದಾರೆ.
ಶೃಂಗೇರಿ ಶ್ರೀ ಪುರಪ್ರವೇಶ
ಶೃಂಗೇರಿ: ಕಳೆದ ವರ್ಷದ ಫೆ. 26 ರಿಂದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಯಾತ್ರೆ ಕೈಗೊಂಡಿದ್ದ ಜಗದ್ಗುರು ಭಾರತೀ ತೀರ್ಥ ಶ್ರೀಗಳು ಶುಕ್ರವಾರ ಶೃಂಗೇರಿಗೆ ಆಗಮಿಸಲಿದ್ದಾರೆ. ಶ್ರೀಗಳ ಭವ್ಯ ಸ್ವಾಗತಕ್ಕಾಗಿ ಪುರಪ್ರವೇಶ ಉತ್ಸವ ಆಯೋಜಿಸಲಾಗಿದೆ.