ಸಂಭ್ರಮದ ಜ್ವಾಲಾಮಾಲಿನಿ ಅಮ್ಮ ರಥೋತ್ಸವ
ನರಸಿಂಹರಾಜಪುರ: ಸಿಂಹನಗದ್ದೆ ಬಸ್ತಿಮಠದಲ್ಲಿ ಜ್ವಾಲಾಮಾಲಿನಿ ಅಮ್ಮನವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಗುರುವಾರ ಬೆಳಗ್ಗೆ ನಿತ್ಯವಿಧಿ ಸಹಿತ ಮಹಾ ನೈವೇಧ್ಯ ಪೂಜೆ, ಭಗವಾನ್ ಚಂದ್ರನಾಥಸ್ವಾಮಿಗೆ 108 ಕಲಾಶಾಭಿಷೇಕ, ಅಮ್ಮನವರಿಗೆ ಪಂಚಾಮೃತ ಅಭಿಷೇಕ ನಡೆಯಿತು. ಮಧ್ಯಾಹ್ನ ಸಿಂಹನಗದ್ದೆ ಬಸ್ತಿಮಠದ ಪೀಠಾಧ್ಯಕ್ಷ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ರಥಾರೋಹಣಕ್ಕೆ ಜ್ವಾಲಾಮಾಲಿನಿ ಅಮ್ಮನವರ ಸನ್ನಿಧಿಯಲ್ಲಿ ಪ್ರಸಾದ ಬೇಡಿಕೆ, ಮಧ್ಯಾಹ್ನ ರಥಾರೋಹಣ ನೆರವೇರಿತು.
ಸಂಜೆ ಮತ್ತೆ ರಾಜಬೀದಿಯಲ್ಲಿ ಜ್ವಾಲಾಮಾಲಿನಿ ಅಮ್ಮನವರ ರಥಯಾತ್ರಾ ಮಹೋತ್ಸವವು ಪಟ್ಟಣದ ಮುಖ್ಯಬೀದಿಯಲ್ಲಿ ನಡೆಯಿತು. ರಥೋತ್ಸವದ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಉಪ್ಪಿನಂಗಡಿಯ ಕೀಲು ಕುದುರೆ, ಮೂಡಬಿದಿರೆಯ ಡ್ರಂ ಸೆಟ್, ಮಂಗಳವಾದ್ಯ, ಗೊಂಬೆಗಳ ಕುಣಿತವು ನಡೆಯಿತು. ಬೇರೆ, ಬೇರೆ ರಾಜ್ಯಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಇದ್ದರು.
ಇಂದು ಕಲಶಾಭಿಷೇಕ: ಶುಕ್ರವಾರ ಶ್ರೀ ಚಂದ್ರನಾಥಸ್ವಾಮಿಗೆ ಮಹಾಭಿಷೇಕ, ಶ್ರೀ ಜ್ವಾಲಾಮಾಲಿನಿ ಅಮ್ಮನರಿಗೆ 108 ಕಲಶಾಭಿಷೇಕ, ಶ್ರೀ ಮಠದಲ್ಲಿರುವ ಬಾಹುಬಲಿಗೆ ಮಹಾಭಿಷೇಕ ಪೂಜೆ, ಜ್ವಾಲಾಮಾಲಿನಿ, ಪದ್ಮಾವತಿ ಅಮ್ಮನವರಿಗೆ ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ, ಅವಭೃತ ಸ್ನಾನ, ಪಾದಪೂಜೆ, ಧ್ವಜಾರೋಹಣದೊಂದಿಗೆ ವಾರ್ಷಿಕ ರಥ ಯಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.