ಸಾಧನೆ ನ್ಯಾಯದ ತಕ್ಕಡಿಯಲ್ಲಿಟ್ಟು ಮತ ನೀಡಿ
ಕ.ಪ್ರ ವಾರ್ತೆ, ಕಡೂರು, ಏ.4
ಹಳ್ಳಿ ಹಳ್ಳಿಯಲ್ಲಿ ಜಾತಿ ಜಾತಿ ನಡುವೆ ಹೊಡೆದಾಡಿಸದೆ ಸದ್ಭಾವನೆಯ ರಾಜಕಾರಣ ಮಾಡಿಕೊಂಡು ಬಂದಿರುವ ನನ್ನ ನಡವಳಿಕೆ, ಅಭಿವೃದ್ದಿ ಮತ್ತು ಪ್ರತಿಪಕ್ಷದವರ ಸಾಧನೆಯನ್ನು ನಿಮ್ಮ ನ್ಯಾಯದ ತಕ್ಕಡಿಯಲ್ಲಿ ಇಟ್ಟು ನ್ಯಾಯಕೊಡುವ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಮತ್ತು ಶಾಸಕ ಸಿ.ಟಿ. ರವಿ ಮನವಿ ಮಾಡಿದರು.
ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಡೂರು ತಾಲೂಕಿನ ದೇವನೂರು ಗ್ರಾಮದಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಈ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿ ಕೈಗೊಂಡಿರುವ ಕೋಟ್ಯಂತರ ಕಾಮಗಾರಿ ಮಾಡಿಸಿ ನಿಮ್ಮ ಅಭಿಪ್ರಾಯ ಕೇಳಲು ಬಂದಿದ್ದೇನೆ. ಜನರನ್ನು ಹೊಡೆದಾಡಿಸಿ ಬೆಂಕಿ ಇಟ್ಟು ರಾಜಕಾರಣ ಮಾಡಿದ ಉದಾಹರಣೆ ಇಲ್ಲ. ಪ್ರತಿ ಹಳ್ಳಿಗಳಲ್ಲಿ ಕನಿಷ್ಠ ಕೆಲಸ ಮಾಡಿದ್ದು ನನಗೆ ಮತ ಕೇಳುವ ಹಕ್ಕು ಇದೆಯೇ ಇಲ್ಲವೇ ಎಂಬುದನ್ನು ನೀವೇ ಹೇಳಬೇಕು.
ತುಳಿಯುವ ಷಡ್ಯಂತ್ರ: ದಬ್ಬಾಳಿಕೆಯ ರಾಜಕಾರಣ ಮಾಡದ ನನ್ನನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕುತಂತ್ರ ನಡೆಸಿ ಏಕ ವ್ಯಕ್ತಿಯನ್ನು ಕಣಕ್ಕಿಳಿಸಿ ತುಳಿಯುವ ಷಡ್ಯಂತ್ರ ಮಾಡುತ್ತಿದ್ದಾರೆ.
ಪರಿಶಿಷ್ಟ ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆಗಳು, 50 ಸುವರ್ಣ ಗ್ರಾಮಗಳು, ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿದ್ದು ಕರಗಡ ಏತ ನೀರಾವರಿ ಯೋಜನೆ ಶೇ. 90ರಷ್ಟು ಕಾಮಗಾರಿ ಮುಗಿದಿದೆ. ಕೇವಲ ಮೂರು ಕಿರುಸೇತುವೆಗಳು ಬಾಕಿಯಿದೆ. ಮೇ ಅಥವಾ ಜೂನ್‌ನಲ್ಲಿ ದೇವನೂರು ಕೆರೆಗೆ ನೀರು ಬರುವ ಕಾಮಗಾರಿ ಮುಗಿಯಲಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ನಮ್ಮ ಪಕ್ಷದ ಆಂತರಿಕ ಜಗಳವಿದ್ದುದರಿಂದ ಪಕ್ಷಕ್ಕ ಸ್ವಲ್ಪ ಹಿನ್ನಡೆಯಾಗಿದೆ ಎಂಬುದನ್ನು ಒಪ್ಪಿಕೊಂಡ ಸಿ.ಟಿ. ರವಿ, ನಾಲ್ಕೂವರೆ ವರ್ಷ ಮಂತ್ರಿಯಾಗುವುದನ್ನು ನಮ್ಮ ಪಕ್ಷದ ಕೆಲವರು ತಡೆ ಹಿಡಿದರೂ ಕೂಡ ಯಾರ ಮೇಲೂ ನಾನು ಆರೋಪ ಅಥವಾ ಬ್ಲಾಕ್‌ಮೇಲ್ ಮಾಡಲಿಲ್ಲ. ನಮ್ಮ ಪಕ್ಷದಲ್ಲಿ ಎಲ್ಲವೂ ಅಂದುಕೊಂಡಂತೆ ಇದ್ದಿದ್ದರೆ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಬೋರ್ಡಿಗೇ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಸಾಧನೆ ಪರ ಮತ ನೀಡಿ: ಮತದಾರರಾದ ನಿಮ್ಮ ನ್ಯಾಯದ ತಕ್ಕಡಿಯಿಂದ ನನ್ನ ಹಾಗೂ ಪ್ರತಿಪಕ್ಷದ ಸಾಧನೆ ಹಿಡಿದು ಸಾಧನೆ ನನ್ನ ಪರವಾಗಿ ವಾಲಿದರೆ ಈ ರವಿಯನ್ನು ಆಶೀರ್ವದಿಸಿ ಬೆಂಬಲಿಸಿ ಎಂದು ಮನವಿ ಮಾಡಿದರು. ಜಿಪಂ ಸದಸ್ಯ ಕಲ್ಮರುಡಪ್ಪ, ಪ್ರಪುಲ್ಲಾ ಮಂಜುನಾಥ್, ನಿಡಘಟ್ಟ ಲೋಕೇಶ್, ವಿಜಯಕುಮಾರ್ ಮಾತನಾಡಿದರು. ಚಿಕ್ಕದೇವನೂರು ರವಿ, ಬಿ. ರಾಜಪ್ಪ, ನಟರಾಜ್, ಮಂಜುನಾಥ್, ಮಿಲ್ಟ್ರಿ ರವಿ, ಭಾರತಿ ಸಿದ್ದಮಲ್ಲಪ್ಪ, ಶೋಭಾ ವೆಂಕಟೇಶ್, ಬಾಲಕೃಷ್ಣ, ಮಲ್ಲಿಕಾರ್ಜುನ್, ಶಂಕರಲಿಗಶೆಟ್ಟೆ, ನಾರಾಯಣಗೌಡ, ಸುಜಾತಬಾಯಿ, ವೀರಭದ್ರಪ್ಪ ಇದ್ದರು.