ಹುಲಿ ಉಗುರು ಪತ್ತೆ: ಇಬ್ಬರ ಬಂಧನ
ಚಿಕ್ಕಮಗಳೂರು: ಮನೆಯಲ್ಲಿ ಅಕ್ರಮವಾಗಿ ಇಡಲಾಗಿದ್ದ ಹುಲಿ ಉಗುರುಗಳನ್ನು ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ತಾಲೂಕು ಮಲ್ಲೇನಹಳ್ಳಿ ಕನಕ ಹಾಗೂ ಶರವಣ ಎಂಬುವವರನ್ನು ಬಂಧಿಸಲಾಗಿದೆ. ಮಲ್ಲೇನಹಳ್ಳಿಯ ಮನೆಯೊಂದರಲ್ಲಿ ಅಕ್ರಮವಾಗಿ ಹುಲಿ ಉಗುರುಗಳನ್ನು ಇಡಲಾಗಿದ್ದು, ಅವುಗಳು ಬೇರೆಡೆಗೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ನಗರ ವೃತ್ತ ನಿರೀಕ್ಷಕರಾದ ಮಧುಸೂದನ್ ನೇತೃತ್ವದಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಸಬ್ ಇನ್ಸ್‌ಸೆಕ್ಟರ್ ಮಧು ಹಾಗೂ ಸಿಬ್ಬಂದಿಯವರು ಗುರುವಾರ ಮನೆಯ ಮೇಲೆ ದಾಳಿ ನಡೆಸಿದರು. ಆರೋಪಿಗಳಿಂದ ಹುಲಿಯ 4 ಉಗುರು ಹಾಗೂ ಕಾಡು ಪ್ರಾಣಿಗಳನ್ನು ಭೇಟೆಯಾಡಲು ಇಟ್ಟಿದ್ದ ಬಲೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.