ಹುಲಿ ಉಗುರು ವಶ: ಇಬ್ಬರ ಬಂಧನ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ. 4
ಮನೆಯಲ್ಲಿ ಅಕ್ರಮವಾಗಿ ಇಡಲಾಗಿದ್ದ ಹುಲಿ ಉಗುರುಗಳನ್ನು ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ತಾಲೂಕು ಮಲ್ಲೇನಹಳ್ಳಿ ಕನಕ ಹಾಗೂ ಶರವಣ ಎಂಬುವವರನ್ನು ಬಂಧಿಸಲಾಗಿದೆ.
ಮಲ್ಲೇನಹಳ್ಳಿಯ ಮನೆಯೊಂದರಲ್ಲಿ ಅಕ್ರಮವಾಗಿ ಹುಲಿ ಉಗುರುಗಳನ್ನು ಇಡಲಾಗಿದ್ದು, ಅವುಗಳು ಬೇರೆಡೆಗೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ನಗರ ವೃತ್ತ ನಿರೀಕ್ಷಕರಾದ ಮಧುಸೂದನ್ ನೇತೃತ್ವದಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಸಬ್ ಇನ್ಸ್ಸೆಕ್ಟರ್ ಮಧು ಹಾಗೂ ಸಿಬ್ಬಂದಿಯವರು ಗುರುವಾರ ಮನೆಯ ಮೇಲೆ ದಾಳಿ ನಡೆಸಿದರು.
ಆರೋಪಿಗಳಿಂದ ಹುಲಿಯ 4 ಉಗುರು ಹಾಗೂ ಕಾಡು ಪ್ರಾಣಿಗಳನ್ನು ಭೇಟೆಯಾಡಲು ಇಟ್ಟಿದ್ದ ಬಲೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾಡು ಪ್ರಾಣಿಗಳ ಭೇಟೆ
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹತ್ಯೆ ಮಾಡುವವರ ಗುಂಪುಗಳಿರುವುದು ಇದರಿಂದ ಮತ್ತೆ ದೃಢಪಟ್ಟಂತಾಗಿದೆ.
ಕಳೆದ ವರ್ಷ ಶೃಂಗೇರಿಯ ವಸತಿ ಗೃಹದ ಮೇಲೆ ಅರಣ್ಯ ಜಾಗೃತದಳದ ಸಿಬ್ಬಂದಿಯವರು ದಾಳಿ ಮಾಡಿ ಆನೆ ದಂತವನ್ನು ವಶಕ್ಕೆ ತೆಗೆದುಕೊಂಡಿದ್ದರು.
ಕೆಲವೆ ದಿನಗಳ ಹಿಂದೆ ಎನ್.ಆರ್.ಪುರ ತಾಲೂಕಿನ ವ್ಯಾಪ್ತಿಯಲ್ಲಿ ಗುಂಪೊಂದು ಹುಲಿಯನ್ನು ಕೊಂದು, ಅದರ ಚರ್ಮವನ್ನು ಕೇರಳಕ್ಕೆ ಮಾರಾಟ ಮಾಡಿರುವ ಪ್ರಕರಣ ಬಯಲಿಗೆ ಬಂದಿತು. ಇದೀಗ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಹುಲಿಯ 4 ಉಗುರು ಪತ್ತೆಯಾಗಿವೆ.
ಈ ಎಲ್ಲಾ ಪ್ರಕರಣಗಳು ನೋಡಿದರೆ ಜಿಲ್ಲೆಯಾದ್ಯಂತ ಕಾಡು ಪ್ರಾಣಿಗಳನ್ನು ಬೇಟೆಯಾಡುವ ತಂಡಗಳಿರುವುದು ಕಂಡು ಬರುತ್ತದೆ.