ಚಿಕ್ಕಮಗಳೂರು ಅಭಿವೃದ್ಧಿಗೆ ಬಿಎಸ್‌ವೈ ಕಾರಣ
ಕಪ್ರ ವಾರ್ತೆ, ಚಿಕ್ಕಮಗಳೂರು, ಏ.5
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪನವರೇ ಕಾರಣ ಎಂದು ಕೆಜೆಪಿಯ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯಕುಮಾರ್ ಹೇಳಿದ್ದಾರೆ.
ಈ ಸತ್ಯವನ್ನು ಸಿ.ಟಿ. ರವಿ ಅವರು ಒಪ್ಪಿಕೊಳ್ಳಬೇಕು ಎಂದು ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡುವಾಗ ತಿಳಿಸಿದರು.
ಅವರು 2004ರಲ್ಲಿ ಶಾಸಕರಾಗಿದ್ದರು, ಎರಡನೇ ಅವಧಿಯಲ್ಲೂ ಶಾಸಕರಾಗಿ, ಸಚಿವರಾಗಿದ್ದಾರೆ. ಚಿಕ್ಕಮಗಳೂರು ಕ್ಷೇತ್ರ 2004ರಲ್ಲಿ ಅಭಿವೃದ್ಧಿಯಾಗಿರಲಿಲ್ಲ. 2008ರ ನಂತರದಲ್ಲಿ ಅಭಿವೃದ್ಧಿಯಾಗಿದೆ. ಅಂದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪ್ರಗತಿಯಾಗಿದೆ ಎಂಬ ಸತ್ಯವನ್ನು ಸಿ.ಟಿ. ರವಿ ಒಪ್ಪಿಕೊಳ್ಳಬೇಕು ಎಂದರು.
ವೈಯಕ್ತಿಕ ದ್ವೇಷ ಇಲ್ಲ: ಸಿ.ಟಿ. ರವಿಯವರ ಬಗ್ಗೆ ವೈಯಕ್ತಿಕವಾಗಿ ದ್ವೇಷ ಇಲ್ಲ. ಆದರೆ, ಅವರು ನಡೆದುಕೊಳ್ಳುವ ರೀತಿಯ ಬಗ್ಗೆ ಪ್ರಶ್ನೆ ಮಾಡಬೇಕಾಗಿದೆ. ಜನರು ಬಯಸಿದರೆ ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆಂದು ಚಿಕ್ಕಮಗಳೂರು ಕ್ಷೇತ್ರದ ಉದ್ದಕ್ಕೂ ಹೇಳುತ್ತಿದ್ದಾರೆ. ಇದು, ಮತದಾರರ ಮನಸ್ಸನು ಪರಿವರ್ತನೆ ಮಾಡುವ ತಂತ್ರ. ಈ ಹಿಂದೆ ಮಾಲೆ ಹಾಕಿ ಜನರನ್ನು ಮರಳು ಮಾಡುತ್ತಿದ್ದರು. ಈಗ ಈ ಕ್ರಮವನ್ನು ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.
ಹೊಂದಾಣಿಕೆ ಇಲ್ಲ: ಏ. 7 ರಂದು 50 ರಿಂದ 60 ಕ್ಷೇತ್ರಗಳ ಅಭ್ಯರ್ಥಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯದ 224 ಕ್ಷೇತ್ರಗಳಲ್ಲಿ ಕೆಜೆಪಿ ಸ್ಪರ್ಧೆ ಮಾಡಲಿದೆ. ಒಂದೆರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದ ಧನಂಜಯಕುಮಾರ್, ಕೆಜೆಪಿಯೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಿರುವುದು ಅವರ ಹತಾಶೆ ಭಾವನೆಯನ್ನು ಹೊರ ಹಾಕುತ್ತಿದೆ. ಕೆಜೆಪಿ ಈ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಲ್ಲಿನ ಅರಳಗುಪ್ಪೆ ಚಂದ್ರೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಘಟಕದ ಸಭೆಯಲ್ಲಿ ಮಾತನಾಡಿದ ಧನಂಜಯಕುಮಾರ್, ನನ್ನನ್ನು ಯಾರೂ ಕೂಡ ಮೀರಿಸಲು ಸಾಧ್ಯವಿಲ್ಲ. ತಾನೇ ನಾಯಕನೆಂದು ಹೇಳಿಕೊಳ್ಳುತ್ತಾ, ಕಳೆದ ಒಂದೂವರೆ ವರ್ಷದಿಂದ ಈಚೇಗೆ ಸಚಿವರಾದ ಮೇಲೆ ತಾನು ನಡೆದಿದ್ದೆ ದಾರಿ, ನನಗೆ ಸರಿಸಾಟಿ ಯಾರೂ ಇಲ್ಲ ಎಂದು ಕೊಂಡಿದ್ದಾರೆ ಎಂದು ಸಿ.ಟಿ. ರವಿ ಅವರ ಹೆಸರು ಪ್ರಸ್ತಾಪ ಮಾಡದೆ ಪರೋಕ್ಷವಾಗಿ ಕಟಕಿಯಾಡಿದರು.
ಬದಲಾವಣೆ ಬಯಸಿದ್ದಾರೆ: ಚಿಕ್ಕಮಗಳೂರು ಕ್ಷೇತ್ರದ ಜನರು ಈ ಬಾರಿ ಬದಲಾವಣೆಯನ್ನು ಬಯಸಿದ್ದಾರೆ. ಇಲ್ಲಿನ ಜನರ ಬದಲಾವಣೆಯ ಬಯಕೆ ಪೂರೈಸೋಣ. ಈ ಯುದ್ದದಲ್ಲಿ ಹೋರಾಡಲು ಮಾನಸಿಕವಾಗಿ ದೃಢ ನಿರ್ಧಾರಕ್ಕೆ ಪಕ್ಷದ ಕಾರ್ಯಕರ್ತರು ಬರಬೇಕು ಎಂದು ಕರೆ ನೀಡಿದರು.
ಬಿ.ಎಸ್. ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಮಾಡಿರುವ ಜನಸೇವೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದ ಧನಂಜಯಕುಮಾರ್, ಈ ದೇಶದ ರಾಜಕಾರಣದ ಚಿತ್ರಣ ನೋಡಿದರೆ ಸ್ವರೂಪ ಬದಲಾಗುತ್ತಿದೆ. ಪ್ರಾದೇಶಿಕ ಪಕ್ಷಗಳಿಂದಲೇ ತಮಗೆ ನ್ಯಾಯಯುತ ಸೌಲಭ್ಯ ಸಿಗಲು ಸಾಧ್ಯ ಎಂಬ ತೀರ್ಮಾನಕ್ಕೆ ಜನರು ಬಂದಿದ್ದಾರೆಂಬುದು ನೆರೆಯ ತಮಿಳುನಾಡು ರಾಜ್ಯದ ರಾಜಕೀಯ ಪಕ್ಷಗಳ ಸ್ಥಿತಿಗತಿಯನ್ನು ನೋಡಿದರೆ ಅರ್ಥವಾಗುತ್ತದೆ. ರಾಜ್ಯದ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಕೆಜೆಪಿ ಕಟಿಬದ್ಧವಾಗಿದೆ. ನಮ್ಮದು ಪ್ರಶ್ನಾತೀತ, ಸಮರ್ಥ ನಾಯಕತ್ವ. ಸರ್ವರಿಗೆ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಒದಗಿಸುವುದೇ ನಮ್ಮ ಗುರಿ. ಸಮೃದ್ಧ ಕರ್ನಾಟಕ ನಮ್ಮ ಕನಸು ಎಂದು ಹೇಳಿದರು.
ಬೇರೆ ಪಕ್ಷಗಳಿಗೆ ಹೋಲಿಕೆ ಮಾಡಿದರೆ ಕೆಜೆಪಿಯಲ್ಲಿ ಗೊಂದಲ, ವಿವಾದ, ಟಿಕೆಟ್‌ಗಾಗಿ ಪ್ರತಿಭಟನೆ ಇಲ್ಲ. ಕೆಪಿಸಿಸಿ ಕಚೇರಿಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಇದನ್ನು ನೋಡಿದರೆ ರಾಜಕೀಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ. ಮತದಾರರು, ಯಾವ ಪಕ್ಷಕ್ಕೆ ಮತ ನೀಡಬೇಕೆಂದು ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದಾರೆ. ಕೊನೆ ಗಳಿಗೆಯಲ್ಲಿ ತೀರ್ಮಾನಕ್ಕೆ ಬರುವ ಶೇ.20 ರಷ್ಟು ಮತಗಳು, ಫಲಿತಾಂಶಕ್ಕೆ ನಿರ್ಣಯಕವಾಗುವುದರಿಂದ ಪಕ್ಷದ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕೆಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ರೈತ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ವಿಕ್ರಮ್, ದಿಲೀಪ್‌ಕುಮಾರ್, ಎಚ್.ಎಚ್. ದೇವರಾಜ್, ಬೆಳ್ಳಿ ಪ್ರಕಾಶ್, ಸಿ.ಎಚ್. ಲೋಕೇಶ್, ತೇಜೇಸ್‌ಕುಮಾರ್, ರವಿಕುಮಾರ್ ಉಪಸ್ಥಿತರಿದ್ದರು.