ಬಾಬು ಜಗಜೀವನರಾಮ್ ಜನ್ಮ ದಿನಾಚರಣೆ
ಕ.ಪ್ರ.ವಾರ್ತೆ, ತರೀಕೆರೆ, ಏ.5
ತಾಲೂಕು ಆಡಳಿತದಿಂದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ರವರ ಜನ್ಮದಿನಾಚರಣೆಯನ್ನು ತಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಉಪವಿಭಾಗಾಧಿಕಾರಿ ಜಿ. ಅನುರಾಧ ಕಾರ್ಯಕ್ರಮ ಉದ್ಘಾಟಿಸಿ, ಡಾ. ಬಾಬು ಜಗಜೀವನರಾಮ್ ಅವರು ಜಾತಿ ಪದ್ಧತಿ ನಿರ್ಮೂಲನೆಗಾಗಿ ಹೋರಾಟ ಮಾಡಿದವರು. ಹಸಿರು ಕ್ರಾಂತಿಯ ಮೂಲಕ ದೇಶದ ಅಭಿವೃದ್ಧಿಗೆ ಕಾರಣರಾದರು. ಆವರ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.
ಡಿವೈಎಸ್ಪಿ ಸದಾನಂದ ಬಿ. ನಾಯಕ್ ಮಾತನಾಡಿ, ಡಾ. ಬಾಬು ಜಗಜೀವನರಾಮ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ದೇವರಾಜ್ ಮಾತನಾಡಿ, ಡಾ. ಬಾಬು ಜಗಜೀವನರಾಮ್ ಅವರು ಸ್ವ ಸಾಮರ್ಥ್ಯದಿಂದ ಉನ್ನತ ಸ್ಥಾನಕ್ಕೇರಿದವರು. ದೇಶ ಕಂಡ ಮಹಾನ್ ನಾಯಕರು ಎಂದರು.
ತಹಸೀಲ್ದಾರ್ ರಂಜಿತ, ಪುರಸಭೆ ಮುಖ್ಯಾಧಿಕಾರಿ ಪಲ್ಲವಿ ಮೊದಲಾದವರು ಸಮಾರಂಭದಲ್ಲಿ ಇದ್ದರು.
--
ನಾಳೆ ಸಿರಿಗೆರೆ ಶ್ರೀಗಳ ಕಾರ್ಯಕ್ರಮ
ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನೀತಿ ಸಂಹಿತೆ ಜಾರಿ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ 7 ರಂದು ನಗರದಲ್ಲಿ ಸಿರಿಗೆರೆಯ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜು ತಿಳಿಸಿದ್ದಾರೆ. ಮೇ ಅಂದು ಬೆ.11ಕ್ಕೆ ನಗರದಲ್ಲಿ ವಿವಿಧ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಭೆಗೆ ರಾಜಕೀಯ ಮುಖಂಡರುಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಆಗಮಿಸಿ ಸಲಹೆಗಳನ್ನು ನೀಡಲು ಕೋರಿದ್ದಾರೆ.