ಬಿಜೆಪಿ ಭ್ರಷ್ಟಾಚಾರಕ್ಕೆ ಬೇಸತ್ತ ಜನ
ಕಪ್ರ ವಾರ್ತೆ,ಚಿಕ್ಕಮಗಳೂರು, ಏ.5
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನೋಡಿ ಜನ ಬೇಸತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದ್ದಾರೆ.
ತಾಲೂಕಿನ ದಾಸರಹಳ್ಳಿ, ಲಕ್ಯಾ, ಹಿರೇಗೌಜ, ದೇವರಹಳ್ಳಿ ಗ್ರಾಮಗಳಲ್ಲಿ ಶುಕ್ರವಾರದಂದು ಕಾಂಗ್ರೆಸ್ ಪಕ್ಷದ ಗ್ರಾಮಗಳಿಗೆ ಭೇಟಿ ಕೊಡಿ ಕಾರ್ಯಕ್ರಮದ ಭಾಗವಾಗಿ ಭೇಟಿ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳಡಿ ಹಣ ಬಿಡುಗಡೆ ಮಾಡಿದೆ. ಬಿಜೆಪಿ ಕೇಂದ್ರದ ಅನುದಾನವನ್ನು ತಮ್ಮ ಅನುದಾನವೆಂದು ಜನರಿಗೆ ಸುಳ್ಳು ಹೇಳಿ ಅಭಿವೃದ್ಧಿ ಮಾಡಿರುವುದಾಗಿ ತಿಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ ಅಧಿಕಾರ ನಡೆಸಲು ವಿಫಲವಾಗಿದ್ದವು. ಬಿಜೆಪಿಯ ಸಚಿವರು ಹತ್ತು ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಭ್ರಷ್ಟಾಚಾರ ನಡೆಸಿ ಜನರ ಬಳಿ ರಾಜಕೀಯದ ನಾಟಕವಾಡುತ್ತಿದ್ದಾರೆ. ಕ್ಷೇತ್ರದ ಶಾಸಕರು ರು. 800 ಕೋಟಿ ಅನುದಾನ ತಂದಿರುವುದಾಗಿ ಹೇಳುತ್ತಿದ್ದಾರೆ. ಅಷ್ಟು ಹಣ ಬಿಡುಗಡೆಯಾಗಿದ್ದರೆ ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಹೊಂದಿರುತ್ತಿತ್ತು. ಅಭಿವೃದ್ಧಿ ಹೆಸರಿನಲ್ಲಿ ಬೇನಾಮಿ ಹೆಸರುಗಳಲ್ಲಿ ಪಕ್ಷದವರೇ ಗುತ್ತಿಗೆ ವಹಿಸಿಕೊಂಡು ಕಳಪೆ ಕಾಮಗಾರಿ ಮಾಡಿದ್ದಾರೆ ಎಂದರು.
ರಾಜಕೀಯ ನಾಟಕ: ಮತದಾರರು ಸಿ.ಟಿ. ರವಿಯವರಿಗೆ ಮತ ನೀಡಿದ್ದು ಅಭಿವೃದ್ಧಿ ಕೆಲಸ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಲು. ಆದರೆ, ಅವರು ಅದನ್ನು ಮರೆತು ತಾವು ಹೆಚ್ಚಿನ ಅಭಿವೃದ್ಧಿ ಮಾಡಿದ್ದೇವೆ ಎಂದು ಜನರ ಬಳಿ ರಾಜಕೀಯ ನಾಟಕವಾಡುತ್ತಿದ್ದಾರೆ. ಕಾಂಗ್ರೆಸ್ 50 ವರ್ಷ ಆಳ್ವಿಕೆ ಮಾಡಿದರೂ ಈ ರೀತಿ ಭ್ರಷ್ಟಾಚಾರ ಮಾಡಿರಲಿಲ್ಲ. ಐದು ವರ್ಷದಲ್ಲಿಯೇ ಇತಿಮಿತಿ ಇಲ್ಲದೆ ಹೆಚ್ಚಿನ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿಯೇ ಪ್ರಥಮ ಬಾರಿಗೆ ಹಿಂದುಳಿದ ವರ್ಗದವರಾದ ಶಾಂತೇಗೌಡರು ಅಭ್ಯರ್ಥಿಯಾಗಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಆಶೀರ್ವದಿಸಬೇಕೆಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಮರಿಗೌಡ, ಎಪಿಎಂಸಿ ಸದಸ್ಯ ಭದ್ರೇಗೌಡ, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಗೇಗೌಡ, ಉಪಾಧ್ಯಕ್ಷ ದತ್ತೇಶ್, ಗ್ರಾ.ಪಂ. ಸದಸ್ಯ ನಾಗರಾಜ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.