ಶಾಂತಿಯುತ ಚುನಾವಣೆಗೆ ಅಗತ್ಯ ಕ್ರಮ
ಕ.ಪ್ರ.ವಾರ್ತೆ, ಕಡೂರು, ಏ.5
ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತ್ತು ವ್ಯವಸ್ಥಿತ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಕಡೂರು ಪಟ್ಟಣದ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚುನಾವಣಾಧಿಕಾರಿ ಲಕ್ಷ್ಮೀನರಸಯ್ಯ ಮತ್ತು ಸಹಾಯಕ ಚುನಾವಣಾಧಿಕಾರಿ ಲಕ್ಷ್ಮಣಪ್ಪ ಮಾತನಾಡಿ, ಮೇ 5ರಂದು ಕಡೂರು ವಿಧಾನಸಭಾ ಚುನಾವಣೆ ನಡೆಯಲಿದೆ. 2013 ಜನವರಿ 1ರ ಜನಗಣತಿಯಂತೆ ಕಡೂರು ಕ್ಷೇತ್ರದಲ್ಲಿ 89,900 ಪುರುಷರು 89,631 ಮಹಿಳೆಯರು ಸೇರಿ ಒಟ್ಟು 1,74,431 ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಿದ್ದಾರೆ ಎಂದರು.
236 ಮತಗಟ್ಟೆ: 122 ಸೂಕ್ಷ್ಮ ,75 ಅತಿಸೂಕ್ಷ್ಮ ಮತ್ತು 30 ಸಾಮಾನ್ಯ ಮತಗಟ್ಟೆ ಸೇರಿ 236 ಮತಗಟ್ಟೆಗಳಿದ್ದು, 136 ಮತಗಟ್ಟೆ ಅಧಿಕಾರಿ ಇದ್ದಾರೆ. ಮಾರ್ಚ್ 20 ರಿಂದ ಮೇ 11ರವಗೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುತ್ತದೆ.
ಪ್ರಥಮ ಹಂತದಲ್ಲಿ ಕ್ಷೇತ್ರದ ಎಲ್ಲೆಡೆ ಫ್ಲೆಕ್ಸ್, ಗೋಡೆಬರಹ, ಹೋಲ್ಡಿಂಗ್ಸ್ಗಳಂತಹ ಮತದಾರರಿಗೆ ಪ್ರಚೋದನೆ ನೀಡುವ ಸಾಮಗ್ರಿ ತೆಗೆಸಿ ಕೆಲವನ್ನು ಮುಚ್ಚಲಾಗಿದ್ದು, ನೀತಿಸಂಹಿತೆ ಪಾಲನೆಗಾಗಿ 8 ಮಾದರಿ ನೀತಿ ಸಂಹಿತೆ ಸಮಿತಿ ರಚಿಸಲಾಗಿದೆ ಎಂದರು.
ಕಡೂರು ಕ್ಷೇತ್ರದ ಕುಂಕಾನಾಡು, ಪಂಚನಹಳ್ಳಿ, ಮತಿಘಟ್ಟ ಮತ್ತು ಚೌಳಹಿರಿಯೂರಿನಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್ಪೋಸ್ಟ್ ತೆರೆಯಲಾಗಿದೆ. ಬೇರೆ ಕಡೆಯಿಂದ ಕಡೂರು ಕ್ಷೇತ್ರಕ್ಕೆ ಮದ್ಯ, ಸೀರೆ, ಪಂಚೆ, ಟಿ.ವಿ. ಚಿನ್ನಾಭರಣ ಸಾಗಿಸಿದಲ್ಲಿ ಅಗತ್ಯ ತಪಾಸಣೆ ಮಾಡಲಾಗುತ್ತದೆ. ಈ ಬಗ್ಗೆ 7 ಎಂಸಿಸಿ ತಂಡಗಳನ್ನು ರಚಿಸಿದ್ದು, ಇವು ಚುರುಕಾಗಿ ಕಾರ್ಯನಿರ್ವಹಿಸಿ, ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಸೇರ್ಪಡೆಗೆ ಅವಕಾಶ: ಮಾ.7 ರವರೆಗೆ ಮತದಾರರ ಪಟ್ಟಿ ಸೇರ್ಪಡೆಗೆ ಕಾಲಾವಕಾಶವಿದ್ದು, ವಾಸಸ್ಥಳ ದೃಢೀಕರಣ ಹಾಗೂ ಅಗತ್ಯ ದಾಖಲೆ ಒದಗಿಸಿ ಮತಪಟ್ಟಿಗೆ ಹೆಸರು ಸೇರಿಸಲು ಜನರು ಈ ಅವಕಾಶ ಉಪಯೋಗಿಸಿಕೊಳ್ಳಬೇಕು. ಇದುವರೆಗೆ 2,519 ಹೊಸ ಅರ್ಜಿ ಬಂದಿದ್ದು, ಅವುಗಳನ್ನು ಪರಿಶೀಲಿಸಿ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಉಳಿದಂತೆ ಸಾರ್ವಜನಿಕರು ತಮ್ಮ ಮನವಿ ಹಾಗೂ ದೂರನ್ನು 18004252014ನ ಫ್ರೀ ಟೋಲ್ಗೆ ಸಂಪರ್ಕಿಸಿ ಮಾಹಿತಿ ನೀಡಬಹುದು. ಸಾಮಾನ್ಯ ವೀಕ್ಷಕರು, ವೆಚ್ಚದ ವೀಕ್ಷಕರು, ಜಾಗೃತಿ ವೀಕ್ಷಕರು, ಪೊಲೀಸ್ ವೀಕ್ಷಕರು, ಸೂಕ್ಷ್ಮ ವೀಕ್ಷಕರು ಸೇರಿ ಈ ಬಾರಿ 5 ಹಂತದ ವೀಕ್ಷಕರನ್ನು ನೇಮಿಸಲಾಗಿದೆ. ವಿವಿಧ ಇಲಾಖೆಗಳಿಂದ 1603 ಮಂದಿ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು.
ಹೆಚ್ಚುವರಿ ಮತಯಂತ್ರ: 38 ಚುನಾವಣಾ ಮಾರ್ಗ ರಚಿಸಿದ್ದು, 32 ಜೀಪುಗಳನ್ನು ಒದಗಿಸಲಾಗುವುದು. ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲು 40 ಎಲಕ್ಟ್ರಾನಿಕ್ ಮತಯಂತ್ರ ನೀಡಲಾಗಿದೆ. ಉಳಿದಂತೆ ಹೆಚ್ಚುವರಿ ಸೇರಿದಂತೆ 272 ಮತಯಂತ್ರಗಳನ್ನು ಆಯೋಗ ನೀಡಲಿದೆ. ಚುನಾವಣೆ ಪಾರದರ್ಶಕವಾಗಿ ಬಿಗಿ ಬಂದೋಬಸ್ತಿನಲ್ಲಿ ಪೋಲೀಸ್ ಮತ್ತು ಅಬಕಾರಿ ಇಲಾಖೆಯೊಂದಿಗೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಚುನಾವಣಾ ಸಿಬ್ಬಂದಿ ತಿಪ್ಪೇಶ್, ಮೂರ್ತಿ, ಪ್ರಕಾಶ್, ಗುರುರಾಜ್ ಹಾಲಮತ್ ಮೊದಲಾದವರು ಉಪಸ್ಥಿತರಿದ್ದರು.