ಹಿರಿಯೂರು ತಾಲೂಕಲ್ಲಿ ಮತ್ತೆ ಭೂಕಂಪ: 2 ಮನೆಗೆ ಹಾನಿ
ಹಿರಿಯೂರು: ಕಳೆದ ಒಂದು ವಾರದಿಂದಲೂ ಭೂಮಿ ಕಂಪಿಸುವ ಅನುಭವವಾಗುತ್ತಿದ್ದರಿಂದ ಆತಂಕಗೊಂಡಿದ್ದ ತಾಲೂಕಿನ ಕಲ್ಲುವಳ್ಳಿ ಭಾಗದ ನಾಯಕರ ಕೊಟ್ಟಿಗೆ ಗ್ರಾಮದಲ್ಲಿ ಶುಕ್ರವಾರ ಸಂಜೆ ಮತ್ತೆ ಭೂಮಿ ಕಂಪಿಸಿದ್ದು, ಮನೆಗಳ ಚಾವಣಿ ಕುಸಿದಿವೆ. ಈ ಘಟನೆಯಿಂದ ಗ್ರಾಮಸ್ಥರು ಮತ್ತೆ ಭೀತಿಗೊಳಗಾಗಿದ್ದು, ಜಿಪಂ ಮಾಜಿ ಅಧ್ಯಕ್ಷ ಎಂ.ಜಯಣ್ಣ ಗ್ರಾಮಕ್ಕೆ ಭೇಟಿಯಿತ್ತು ಭಯಗೊಂಡಿದ್ದವರಿಗೆ ಧೈರ್ಯ ಹೇಳಿದರು. ಕಳೆದ ಒಂದು ವಾರದಿಂದ ಭೂಮಿ ಕಂಪಿಸುತ್ತಿರುವ ಸುದ್ದಿ ಬಿತ್ತರಗೊಳ್ಳುತ್ತಿದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜಿಲ್ಲಾಡಳಿತವಂತೂ ಹೊಣೆಗೇಡಿಯಂತೆ ವರ್ತಿಸುತ್ತಿದೆ ಎಂದು ಜಯಣ್ಣ ಸುದ್ದಿಗಾರರೊಂದಿಗೆ ಮಾತನಾಡಿ ಆರೋಪಿಸಿದರು. ಕೂಡಲೇ ಜನಪ್ರತಿನಿಧಿಗಳು ಮತ್ತು ತಹಸೀಲ್ದಾರ್, ಜಿಲ್ಲಾಧಿಕಾರಿಗಳಾದಿಯಾಗಿ ಈ ಗ್ರಾಮಗಳಿಗೆ ತುರ್ತಾಗಿ ಭೇಟಿಯಿತ್ತು ಜನರಿಗೆ ಸಾಂತ್ವನ ಹೇಳುವ ಪ್ರಯತಕ್ಕೆ ಮುಂದಾಗಬೇಕು. ಈ ಭೂಕಂಪನದ ಸಮಸ್ಯೆಯನು ಸಂಬಂಧ ಪಟ್ಟ ಇಲಾಖೆಯ ತಜ್ಞರ ಅಭಿಪ್ರಾಯ ಪಡೆದು ಧೃಡೀಕರಿಸಬೇಕು. ಇಲ್ಲವಾದಲ್ಲಿ ವೈಜ್ಞಾನಿಕ ಕಾರಣಗಳನು ನೀಡಿ ಜನರಿಗೆ ಧೈರ್ಯ ಹೇಳುವ ಕೆಲಸ ಮಾಡಬೇಕು ಎಂದರು.