ಅಪಪ್ರಚಾರದ ವಿರುದ್ಧ ಚರ್ಚೆಗೆ ಸಿದ್ಧ
ಕ.ಪ್ರ.ವಾರ್ತೆ, ಕೊಪ್ಪ, ಏ.7
ಬಿಜೆಪಿಯ ಅಧಿಕಾರ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಅಗಿರುವ ಅಭಿವೃದ್ಧಿಯನ್ನು ಸಹಿಸದೇ ವಿರೋಧ ಪಕ್ಷಗಳ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೇಗೆ ಬಿಜೆಪಿ ಸಿದ್ಧವಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ್ ಜೋಯಿಸ್ ತಿಳಿಸಿದ್ದಾರೆ.
ಭಾನುವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಟಿ.ಡಿ. ರಾಜೇಗೌಡರು ಜಿಪಂ ಅಧ್ಯಕ್ಷರಾದ ಸಮಯದಲ್ಲಿ ಶೃಂಗೇರಿ ಕ್ಷೇತ್ರಕ್ಕೆ ಯಾವ ಅಭಿವೃದ್ಧಿಯ ಕೊಡುಗೆಯನ್ನೂ ನೀಡಿಲ್ಲ ಎಂದರು.
ಪ್ರಚಾರಕ್ಕೆ ವಿಷಯವಿಲ್ಲ: 2004ರ ಪೂರ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರದ ಅವಧಿಯಲ್ಲಿಯೂ ಕೂಡ ಅಗಿನ ಶಾಸಕರು ಶೃಂಗೇರಿ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಮಾಡದೇ ಹೋಗಿದ್ದರಿಂದ ಈ ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಸಲು ಯಾವುದೇ ವಿಷಯ ಇಲ್ಲದ ಕಾರಣ ಬಿಜೆಪಿ ಬಗ್ಗೆ ಅಪಪ್ರಚಾರವನ್ನು ಮಾಡುತ್ತಿದ್ದಾರೆ ಎಂದವರು ಹೇಳಿದರು.
ಈ ಅಪಪ್ರಚಾರಗಳಿಗೆ ತಕ್ಕ ಉತ್ತರ ನೀಡಲು ಬಿಜೆಪಿ ಪಕ್ಷ ಸಿದ್ದವಿದ್ದು, ಬಹಿರಂಗ ಚರ್ಚೆಗೆ ವಿರೋಧ ಪಕ್ಷದ ನಾಯಕರು ನಿಗದಿಪಡಿಸಿದ ದಿನಾಂಕದಂದು ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಚುನಾವಣೆ ಪ್ರನಾಳಿಕೆಯಲ್ಲಿ ನೀಡಿದ ಭರವಸೆಯನ್ನು 5 ವರ್ಷದ ಅವಧಿಯಲ್ಲಿ ಶೇ.85 ಭಾಗ ಪೂರೈಸಿದೆ. ಈ ಎಲ್ಲಾ ಅಭಿವೃದ್ಧಿಗಳೂ ವಿರೋಧ ಪಕ್ಷದ ಕಣ್ಣಿಗೆ ಕಂಡರೂ ಜಾಣ ಕುರುಡರಂತೆ ವರ್ತಿಸುತ್ತಾ ಈ ಚುನಾವಣೆಯಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ಮತದಾರರು ನೀಡುತ್ತಾರೆ ಎಂದರು.