ಓದು ಬದುಕು ಬದಲಾಯಿಸುವ ದಾರಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.7
ಓದು ವ್ಯಕ್ತಿಯನ್ನು ಪರಿವರ್ತಿಸುತ್ತದೆ. ಬಹಳಷ್ಟು ಸಾಧಕರ ಬದುಕು ಬದಲಾಯಿಸುವ ದಾರಿ ತೋರಿಸಿದೆ. ವೇದನೆಯನ್ನು ಸಾಧನೆಯಾಗಿ ಪರಿವರ್ತಿಸಲು ಓದು ಸಹಕಾರಿ ಎಂದು ಸಾಹಿತಿ ಕುಂದೂರು ಅಶೋಕ್ ಹೇಳಿದ್ದಾರೆ.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ನಗರದ ಆಜಾದ್ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಶನಿವಾರದಂದು ಓದುವ ಸುಖ ಕುರಿತಂತೆ ಮಾತನಾಡಿದರು.
ಓದುವ ಸಂಸ್ಕೃತಿ ಮೈಗೂಡಿಸಿಕೊಂಡರೆ ಒಳ್ಳೆಯ ವ್ಯಕ್ತಿಗಳಾಗಬಹುದು.
ಮಹಾತ್ಮಾಗಾಂಧೀಜಿ ರೂಪುಗೊಂಡಿದ್ದು ಒಂದು ಪುಸ್ತಕದಿಂದ. ಮಾರ್ಟಿನ್ಲೂಥರ್ ಸಾಧಕರಾಗಿದ್ದು ಪುಸ್ತಕದಿಂದ ಸಾಮಾನ್ಯ ದೋಣಿ ನಡೆಸುವ ಕುಟುಂಬದ ಬಾಲಕ ಓದುವ ಸಂಸ್ಕೃತಿಯಿಂದ ಜ್ಞಾನ ಗಳಿಸಿ ಕ್ಷಿಪಣಿ ಜ್ಞಾನದ ಮೂಲಕ ಜಗತ್ತಿನ ಗಮನಸೆಳೆದು ಭಾರತದ ರಾಷ್ಟ್ರಪತಿಯಾದ ಅಬ್ದುಲ್ ಕಲಾಂರ ಇತಿಹಾಸ ಕಣ್ಮುಂದೆ ಇದೆ ಎಂದರು.
ದೇಶ ರೂಪಿಸುವ ಹೊಣೆ: ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ. ಜ್ಞಾನ ಪ್ರವಾಹದ ರೂಪದಲ್ಲಿ ನುಗ್ಗುತ್ತಿದೆ. ಓದುವ ಹವ್ಯಾಸ ರೂಢಿಸಿಕೊಂಡು ಸಾಧ್ಯವಾದಷ್ಟು ಜ್ಞಾನ ಸಂಪಾದಿಸಿ ನಮ್ಮ ಬದುಕಿನ ಜೊತೆಗೆ ದೇಶದ ಭವಿಷ್ಯವನ್ನೂ ರೂಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದ ಕುಂದೂರು ಅಶೋಕ್, ಮಹಾಪುರುಷರ ಜೀವನ ಸಾಧನೆ ಅರಿತರೆ ಬಾಳಿಗೆ ಗುರಿ ಸಿಗುತ್ತದೆ ಎಂದು ಹೇಳಿದರು.
ಇತಿಹಾಸ ಅರಿಯದವ ಇತಿಹಾಸ ನಿರ್ಮಾಣ ಮಾಡಲಾರ. ಓದುವ ದೇಶಗಳು ಅಭಿವೃದ್ಧಿ ಪಥದಲ್ಲಿ ಓಡುವ ರಾಷ್ಟ್ರಗಳೂ ಹೌದು ಎಂಬ ನುಡಿಗಟ್ಟನ್ನು ಉಲ್ಲೇಖಿಸಿ, ಅಭಿವೃದ್ಧಿಗೂ, ಓದಿಗೂ ನಿಕಟ ಸಂಬಂಧವಿದೆ. ವಿದ್ಯೆ ಸಾಗರದಷ್ಟು ವಿಶಾಲ. ನಾವು ಪ್ರಯತ್ನಿಸಿದರೆ ಕೆಲವು ಹನಿಗಳಷ್ಟು ಮಾತ್ರ ಪಡೆಯಬಹುದು. ಜಗತ್ತಿನಲ್ಲಿ ಕೋಟ್ಯಂತರ ಸಸ್ಯ, ಪ್ರಾಣಿ, ಪಕ್ಷಿ ಮತ್ತಿತರ ಪ್ರಬೇಧಗಳಿವೆ. ಅದರಲ್ಲಿ ಕೆಲವು ಮಾತ್ರ ನಮಗೆಲ್ಲಾ ಗೊತ್ತಿದೆ. ಗೊತ್ತಿಲ್ಲದ ಸಂಗತಿಗಳೇ ಅಪಾರವಾಗಿರುವಾಗ ಓದುವ ಸಂಸ್ಕೃತಿಯ ಮೂಲಕ ಜ್ಞಾನದ ಹರವನ್ನು ವಿಸ್ತಾರ ಮಾಡಿಕೊಳ್ಳಬಹುದು ಎಂದರು.
ಓದು ಬೆಳಕು: ಒಳ್ಳೆಯ ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸ ಬಾಲ್ಯದಲ್ಲೇ ರೂಢಿಸಿಕೊಳ್ಳಬೇಕು. ರಜಾ ಅವಧಿಯಲ್ಲಿ ಕೆಲವು ಒಳ್ಳೆಯ ಪುಸ್ತಕವನ್ನಾದರೂ ಓದಿ ರಜೆಯನ್ನು ಸಾರ್ಥಕಪಡಿಸಿಕೊಳ್ಳಬೇಕೆಂದ ಕುಂದೂರು ಅಶೋಕ್, ಓದು ಜೀವನದ ಬೆಳಕು. ಸುಖದ ಸಾಧನ ಎಂದು ಬಣ್ಣಿಸಿದರು.
ಸಮುದಾಯದತ್ತ ಶಾಲೆ ಕುರಿತಂತೆ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕ ಮಲ್ಲಿಕಾರ್ಜುನ ಮಾತನಾಡಿದರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ಎಸ್.ಈ. ಲೋಕೇಶ್ವರಾಚಾರ್ ವಂದಿಸಿದರು.