ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚುನಾವಣೆ ಅಕ್ರಮ ತಡೆಗೆ ಸಿರಿಗೆರೆ ಶ್ರೀ ಪ್ರಯೋಗ

Lingaraj Badiger
Updated On : 8 Apr 2013, 11:32 am

ಚಿಕ್ಕಮಗಳೂರು: ಚುನಾವಣೆಗಳಲ್ಲಿ ನಡೆಯುವ ಅಕ್ರಮ ಮತ್ತು ಭ್ರಷ್ಟಚಾರ ತಡೆಗಟ್ಟಿ ನ್ಯಾಯಸಮ್ಮತವಾಗಿ ನಡೆಸುವಂತೆ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಸಿರಿಗೆರೆ ತರಳಬಾಳು  ಮಠಾಧೀಶರಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿನೂತನ ಪ್ರಯೋಗ ಆರಂಭಿಸಿದ್ದಾರೆ.
ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಯೋಗ ಮಾಡಲಾಗುತ್ತಿದೆ. ಕಳೆದ ಮಾ. 28ರಂದು ಚಿಕ್ಕಮಗಳೂರು ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳು ಸಿರಿಗೆರೆಯ ತರಳಬಾಳು ಮಠಕ್ಕೆ ತೆರಳಿ, ಈ ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರು.
ಈ ವಿಷಯವನ್ನು ಶ್ರೀಗಳು ಮತದಾರರಿಗೆ ತಿಳಿಸಲು ಭಾನುವಾರದಂದು ಸಮಯ  ನಿಗದಿಪಡಿಸಿದ್ದರು. ಅದರಂತೆ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡ, ಅಭ್ಯರ್ಥಿಗಳ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಸಭೆ ನಡೆಸಿದರು.
ಎಲ್ಲರಿಗೂ ಗೌರವ: ಸಭೆ ಆರಂಭಗೊಂಡ ಪ್ರಥಮದಲ್ಲಿ ಶ್ರೀಗಳು ಮಾತನಾಡಿ, ಸಂವಿಧಾನ ಧರ್ಮ ನಿರಪೇಕ್ಷ ಹಾಗೂ ಜಾತ್ಯತೀತವಾದುದು. ಯಾವುದೇ ಧರ್ಮವನ್ನು ಉಪೇಕ್ಷೆ ಮಾಡಬಾರದು. ಎಲ್ಲಾ ಧರ್ಮಗಳಿಗೆ ಗೌರವ  ನೀಡುವುದು ನಮ್ಮ ಸಂವಿಧಾನದ ಮೂಲ ಉದ್ದೇಶ. ಹೆಚ್ಚು ಜನಸಂಖ್ಯೆ ಹೊಂದಿರುವವರಿಗೆ ಮಣೆ ಹಾಕುವುದು, ಕಡಿಮೆ ಜನಸಂಖ್ಯೆ ಹೊಂದಿರುವ ಜನಾಂಗವನ್ನು ನಿರ್ಲಕ್ಷಿಸಬಾರದು. ಬಡವ ಇರಲಿ, ಶ್ರೀಮಂತ ಇರಲಿ ಎಲ್ಲರನ್ನೂ ಸಮಾನವಾಗಿ ನೋಡುವುದು ಸಂವಿಧಾನದ ಮೂಲ ಧ್ಯೇಯ.
ಪರಿಪೂರ್ಣ, ಅಪರೂಪದ ಸಂವಿಧಾನ ನಮ್ಮ ದೇಶದಲ್ಲಿದೆ. ಆದರೆ, ಆಗಿನ ಮಹನೀಯರು ಹೋರಾಟ, ಬಲಿದಾನ ಮಾಡಿ ಸ್ವಾತಂತ್ರ ತಂದುಕೊಟ್ಟಿದ್ದಾರೆ. ಧ್ಯೇಯಕ್ಕೆ ಅನುಗುಣವಾಗಿ ಸಾಧ್ಯವಾಗುವ ಮಟ್ಟಿಗೆ ಅಪರೂಪದ ನಿಯಮಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿಸ್ವಾರ್ಥ ಭಾವನೆ ಇತ್ತು.  ಕ್ರಮೇಣ ಅದು ಕ್ಷೀಣಗೊಂಡು ಸ್ವಾರ್ಥ ಭಾವನೆ ಹೆಚ್ಚು ಬೆಳೆದಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತೆ. ಈಗೀನ ರಾಜಕೀಯ ಧುರೀಣರ ನಡವಳಿಕೆ ಊಹೆ ಮಾಡಲು ಸಾಧ್ಯವಾಗದ ಮಟ್ಟಿಗೆ ಬೆಳೆದಿದೆ. ಈ ಬೆಳವಣಿಗೆ ಸಂವಿಧಾನ ರಚನೆ ಸಂದರ್ಭದಲ್ಲಿ ಗಮನಕ್ಕೆ ಬಂದಿರಲಿಲ್ಲ ಎಂದೆನಿಸುತ್ತದೆ ಎಂದರು.
ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜೆಡಿಎಸ್  ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ, ಕಾಂಗ್ರೆಸ್ ಅಭ್ಯರ್ಥಿ ಶಾಂತೇಗೌಡ, ಬಿಎಸ್ಪಿ ಅಭ್ಯರ್ಥಿ ಕೆ.ಟಿ.  ರಾಧಾಕೃಷ್ಣ, ಪಕ್ಷದ ಮುಖಂಡರಾದ ಎಸ್.ಎಲ್.  ಭೋಜೇಗೌಡ, ಪ್ರೇಮ್‌ಕುಮಾರ್, ಸಿ.ಎಚ್. ಲೋಕೇಶ್,  ಪಿ.ವಿ. ಲೋಕೇಶ್, ರೇಣುಕಾರಾಧ್ಯ, ಸ್ನೇಕ್ ನರೇಶ್, ಕಲ್ಲೇಶ್, ಶಂಕರಲಿಂಗೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement