ಚುನಾವಣೆ ಅಬ್ಬರದ ಜತೆ ಹೆಚ್ಚಿದ ನೀರಿನ ಬರ
ಕ.ಪ್ರ.ವಾರ್ತೆ, ಕಡೂರು, ಏ.7
ಒಂದೆಡೆ ವಿಧಾನಸಭಾ ಚುನಾವಣೆಯ ಕಾವು ರಂಗು ಪಡೆಯುತ್ತಿದ್ದರೆ, ಮತ್ತೊಂದೆಡೆ ನಿರಂತರ ಬರಗಾಲದಿಂದ ಮಳೆ ಬಾರದೆ ಕಡೂರು ಪಟ್ಟಣದಲ್ಲಿ ಕೊಳವೆ ಬಾವಿಯ ನೀರಿನ ಪ್ರಮಾಣ ಕಡಿಮೆಯಾಗಿ ಎಲ್ಲೆಡೆ ನೀರಿಗೆ ಹಾಹಾಕಾರ ಎದ್ದಿದೆ.
ಪಟ್ಟಣದಲ್ಲಿರುವ 23 ವಾರ್ಡುಗಳಲ್ಲಿ ನೀರಿನ ತೊಂದರೆ ಹೆಚ್ಚಾಗಿದ್ದು, ಹೆಚ್ಚುತ್ತಿರುವ ತಾಪಮಾನದಿಂದ ಆರ್ಸಿಸಿ ಕಟ್ಟಡಗಳ ಮೇಲಿನ ಟ್ಯಾಂಕುಗಳಲ್ಲಿ ಸಂಗ್ರಹವಾಗುವ ನೀರು ಕಾಯಿಸಿದಂತಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗೂ ಮುಂಚೆಯೇ ಬಿಗಡಾಯಿಸಿದ್ದ ಕಡೂರು ಪಟ್ಟಣದ ನೀರಿನ ಸಮಸ್ಯೆಯು ಪುರಸಭಾ ಚುನಾವಣೆಯ ಆಕಾಂಕ್ಷಿತ ಅಭ್ಯರ್ಥಿಗಳು ತಾವು ಅಪೇಕ್ಷಿಸಿದ್ದ ವಾರ್ಡುಗಳಿಗೆ ಉಚಿತವಾಗಿ ನೀರು ಪೂರೈಕೆ ಮಾಡಿದ್ದರಿಂದ ಕೆಲ ದಿನಗಳ ಮಟ್ಟಿಗೆ ನೀರಿನ ಸಮಸ್ಯೆ ನೀಗಿತ್ತು.
ನೀರು ಸ್ಥಗಿತ: ಸ್ಥಳೀಯ ಚುನಾವಣೆ ನಂತರ ಅಭ್ಯರ್ಥಿಗಳ ಉಚಿತ ನೀರು ಪೂರೈಕೆ ಸ್ಥಗಿತವಾಗಿ ಜನ ಮತ್ತಷ್ಟು ಸಂಕಷ್ಟ ಅನುಭವಿಸುವಂತಾಯಿತು. ಇದೀಗ ವಿಧಾನಸಭೆ ಚುನಾವಣೆ ಎದುರಾಗಿ ನೀತಿ ಸಂಹಿತೆ ಜಾರಿಯಿಂದ ನೂತನ ಪುರಸಭಾ ಸಮಿತಿ ಅಸ್ತಿತ್ವಕ್ಕೆ ಬಾರದೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಆದರೂ ಪುರಸಭೆಯಿಂದ ಅಲ್ಲಲ್ಲಿ ಹೊಸದಾಗಿ ನೀರಿನ ಪಾಯಿಂಟ್ ಮಾಡಿದ್ದರೂ ಸಹ ಕೆಲವೆಡೆ ನೀರು ಸಿಕ್ಕಿದರೆ ಮತ್ತೆ ಕೆಲವೆಡೆ ನೀರು ಸಿಗದೆ ಹೊಸ ಕೊಳವೆ ಬಾವಿಗಳೂ ವಿಫಲವಾಗುತ್ತಿವೆ. ಕಡೂರು ಪಟ್ಟಣಕ್ಕೆ ಯಾವುದೇ ಜಲಮೂಲ, ನದಿಮೂಲ ಇಲ್ಲದೆ, ಮಳೆಯಿಲ್ಲದೆ ಏಳೆಂಟು ವರ್ಷದಿಂದ ವೇದಾನದಿ ಹಳ್ಳ ಕೂಡ ಬತ್ತಿರುವುದರಿಂದ ಕೊಳವೆ ಬಾವಿಗಳಿಂದಲೇ ಕಡೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಆಗಬೇಕಿದೆ.
ಕಡಿಮೆಯಾದ ನೀರಿನ ಪ್ರಮಾಣ: ಪಟ್ಟಣದಲ್ಲಿ 5 ಓವರ್ ಹೆಡ್ ಟ್ಯಾಂಕ್ ಇದ್ದು, ವೇದಾ ಪಂಪ್ ಹೌಸಿನಲ್ಲಿರುವ 14 ಕೊಳವೆ ಬಾವಿಗಳಲ್ಲಿ ಕೇವಲ 3 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಪಟ್ಟಣದಲ್ಲಿರುವ 94 ಬೋರ್ವೆಲ್ಗಳಲ್ಲಿ ಸುಮಾರು 30 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅವುಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.
ಸುಮಾರು 13 ವಾರ್ಡುಗಳಲ್ಲಿ ನೀರಿನ ಸಮಸ್ಯೆ ಸಂಪೂರ್ಣ ಹದಗೆಟ್ಟು ಎಲ್ಲೆಡೆ ವಾರಕ್ಕೊಮ್ಮೆ ಹಾಗೂ 10 ದಿನಕ್ಕೊಮ್ಮೆ ಮಾತ್ರ ನೀರು ಬಿಡುತ್ತಿದ್ದರೆ, ಉಳಿದಂತೆ ಟ್ಯಾಂಕಿನಿಂದ ನೀರು ಪೂರೈಕೆ ಮಾಡಿದಾಗ ಮಾತ್ರ ಜನರಿಗೆ ನೀರು ಎನ್ನುವ ಸ್ಥಿತಿಯಿದೆ.
ಬರಗಾಲದಿಂದ ಮಳೆಯಿಲ್ಲದೆ ನೀರಿನ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿ ಬತ್ತಿಹೋಗುತ್ತಿವೆ. ಖಾಸಗಿ ಕೊಳವೆ ಬಾವಿಗಳಿಂದ ಟ್ಯಾಂಕರ್ಗಳಿಗೆ ಲೋಡ್ ಮಾಡಿ ಪೂರೈಸುತ್ತಿದ್ದ ಕೊಳವೆ ಬಾವಿಗಳ ಅಂತರ್ಜಲ ಕಡಿಮೆಯಾಗುತ್ತಿವೆ.
20 ಲೀಟರ್ ನೀರು: ಕಡೂರಿನಲ್ಲಿ ಧರ್ಮಸ್ಥಳ ಯೋಜನೆಯಿಂದ ಇರುವ ಒಂದು ಶುದ್ಧಗಂಗಾ ಘಟಕದಿಂದ ಒಂದು ಕುಟುಂಬಕ್ಕೆ ತಲಾ 20 ಲೀಟರ್ ಕುಡಿಯುವ ನೀರು ಲಭ್ಯವಾಗುತ್ತಿದೆ. ಹೋಟೆಲ್, ಚಿತ್ರಮಂದಿರ, ಛತ್ರ ಮತ್ತು ದೊಡ್ಡ ಮನೆಯವರು ಖಾಸಗಿ ಟ್ಯಾಂಕರ್ಗಳಿಂದ ನೀರು ಹಾಕಿಸಿಕೊಳ್ಳುತ್ತಿದ್ದಾರೆ.
ಇನ್ನು ಜನಪ್ರತಿನಿಧಿಗಳು ಚುನಾವಣೆ ಗುಂಗಿನಲ್ಲಿ ಮುಳುಗಿದ್ದಾರೆ. ಮಳೆಬಾರದೆ ಪಟ್ಟಣದ ಜನ ಜೀವನವೇ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿ ತತ್ತರಿಸುತ್ತಿದ್ದರೆ, ಇನ್ನು ಹಳ್ಳಿಗಾಡಿನ ಜನರ ನೀರಿನ ಬವಣೆ ಊಹಿಸಲೂ ಕಷ್ಟವಾಗುತ್ತಿದೆ. ಕೆಲವೇ ದಿನಗಳಲ್ಲಿ ಮಳೆ ಬಾರದೇ ಹೋದಲ್ಲಿ ಜನ ಜಾನುವಾರುಗಳ ಜೀವನ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ.
-ಕಡೂರು ಕೃಷ್ಣಮೂರ್ತಿ