ಜೆಡಿಎಸ್‌ನತ್ತ ಮತದಾರರ ಒಲವು: ದತ್ತಾ ವಿಶ್ವಾಸ
ಕ.ಪ್ರ.ವಾರ್ತೆ,ಬೀರೂರು, ಏ.7
ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ರಾಜಕೀಯ ಬದಲಾವಣೆ ಬಯಸಿದ್ದು, ಕಡೂರು, ಬೀರೂರು ಪಟ್ಟಣಗಳ ಮತದಾರರು ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಜೆಡಿಎಸ್ ಕಚೇರಿ ಉಧ್ಘಾಟಿಸಿ ಮಾತನಾಡಿ, ಬಯಲುಸೀಮೆಯ ಕಡೂರು ತಾಲೂಕು ಶಾಪಗ್ರಸ್ತವಾಗಿದ್ದು ಬರಗಾಲದಿಂದ ತತ್ತರಿಸಿ ಜನಜಾನುವಾರುಗಳು ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಮೂಲ ಸಮಸ್ಯೆಗಳಾದ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಒಳಚರಂಡಿ ಯೋಜನೆಗಳಿಗೆ ಆದ್ಯತೆ ನೀಡಿ ಕಾಲಮಿತಿಯೊಳಗೆ ಈ ಯೋಜನೆಗಳು ಅನುಷ್ಠಾನಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜನತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಸುಲಭವಾಗಿ ಸಿಗುವಂತಾಗಬೇಕು. ನೇರವಾಗಿ ಜನತೆಯನ್ನು ಸ್ಪಂದಿಸುವ ಜನಪ್ರನಿಧಿಗಳಾಗಬೇಕು. ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಕಳಕಳಿ ಹೊಂದಿರುವ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ಸರಸ್ವತಿಪುರ ಜಿಪಂ ಸದಸ್ಯ ಬಿ.ಪಿ. ನಾಗರಾಜ್ ಮಾತನಾಡಿ, ಪಕ್ಷದ ಕಾರ್ಯಕರ್ತರು ಒಗ್ಗಟಿನಿಂದ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ತಿಳಿಸಿದರು. ಮಹೇಶ್ವರಪ್ಪ, ಸೀಗೇಹಡ್ಲುಹರೀಶ್, ಗಂಗಾಧರನಾಯ್ಕ, ಯಶೋಧರ, ತಿಪ್ಪೇಶ್, ಶಶಿಧರ್, ಮೂಡಿಗೆರೆಯ ಜ್ವಾಲಯ್ಯ ಇದ್ದರು.