ಶೇ.100 ಮತದಾನ ಮಾಡಿ: ಡಾ. ಕೌಸರ್
ಚಿಕ್ಕಮಗಳೂರು: ಶೇ.100ರಷ್ಟು ಮತದಾನವಾಗಲು ಯುವ ಜನತೆ ಸಹಕರಿಸಿ ಸುಭದ್ರ, ಸುಸ್ಥಿರ ಸರ್ಕಾರ ರಚನೆಗೆ ಕಾರಣರಾಗಬೇಕೆಂದು ಐಡಿಎಸ್‌ಜಿ ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಡಾ. ಜರೀನಾ ಕೌಸರ್ ಹೇಳಿದ್ದಾರೆ. ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ನಗರದ ಐ.ಡಿ.ಎಸ್.ಜಿ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ನಡೆದ ಮತದಾನ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಮತದಾನ ಪವಿತ್ರ ಕರ್ತವ್ಯ. ಉತ್ತಮ ನಾಡನ್ನು ಕಟ್ಟಲು, ಸುಭದ್ರನಾಡು ನಿರ್ಮಾಣಕ್ಕೆ, ದೇಶದ ಪ್ರಗತಿಯ ಚಿಂತನೆಗೆ ಪೂರಕವಾದ ಜನಪ್ರತಿನಿಧಿಗಳನ್ನು ಮತ ಚಲಾಯಿಸುವ ಮೂಲಕ ಚುನಾಯಿಸಿ ಜವಾಬ್ದಾರಿಯುತ ಸರ್ಕಾರ ರಚನೆಗೆ ಕಾರಣಕರ್ತರಾಗುತ್ತಾರೆ ಎಂದರು.
ಕಡ್ಡಾಯವಾಗಿ ನೋಂದಾಯಿಸಿ: ಸಂಪನ್ಮೂಲ ಶಿಕ್ಷಕ ಡಾ.ಜಿ.ಎಂ. ಗಣೇಶ್ ಮಾತನಾಡಿ, ದೇಶದ ಶೇ.40ರಷ್ಟು ಜನ ಮತದಾನದಿಂದ ಹೊರಗುಳಿಯುತ್ತಿದ್ದಾರೆ. ಸರಾಸರಿ ಶೇ.60ರಷ್ಟು ಮಾತ್ರ ಚುನಾವಣೆಗಳಲ್ಲಿ ಮತದಾನವಾಗುತ್ತಿದೆ. ಮತದಾರರ ಪಟ್ಟಿಯಿಂದ ಹೊರಗುಳಿದವರ ಸಂಖ್ಯೆಯೂ ದೊಡ್ಡದಿದೆ. 18 ವರ್ಷ ಪೂರ್ಣಗೊಂಡವರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸುಶಿಕ್ಷಿತರು ಮತದಾನದಿಂದ ದೂರ ಉಳಿಯುತ್ತಿರುವುದು ಆತಂಕದಾಯಕ. ಅರ್ಹ ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸುವ ಮೂಲಕ ಭವಿಷ್ಯದ ರಾಷ್ಟ್ರ ಕಟ್ಟಲು ಕಾಣಿಕೆ ನೀಡಬೇಕೆಂದರು.
ರಾಜ್ಯಶಾಸ್ತ್ರ ಉಪನ್ಯಾಸಕ ಬಿ.ಸಿ. ಬಸವರಾಜಪ್ಪ, ಸಂಪನ್ಮೂಲ ಶಿಕ್ಷಕರಾದ ಎಚ್.ಎಂ. ಓಂಕಾರಪ್ಪ ಮತ್ತು ನೀಲಕಂಠಪ್ಪ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಬಿ. ಯೋಗೀಶ್ ಸ್ವಾಗತಿಸಿದರು.
ಮತ ಹಾಕುವ ಮುನ್ನ ಕೇಳಿ ಗೋಳು
ಶಿವಮೊಗ: ಈಶ್ವರಪ್ಪನವರ ಕಮಲದ ಗುರುತಿಗೆ ಓಟು ಹಾಕುವುದಕ್ಕೆ ಮೊದಲು ನಮ್ಮ ವ್ಯಥೆ ಕೇಳಿ ಎಂಬ ಶಿರ್ಷಿಕೆ ಹೊಂದಿದ ಕರಪತ್ರವೊಂದು ನಗರದ ವಿವಿಧೆಡೆ ಪ್ರಸಾರವಾಗಲಾರಂಭಿಸಿದೆ. ಭಾನುವಾರ ಈ ಕರಪತ್ರ ಸಾಗರ ರಸ್ತೆಯ ಲಗನ ಕಲ್ಯಾಣ ಮಂದಿರದ ಸಮೀಪ ಹಂಚಿಕೆಯಾಗುತ್ತಿತ್ತು.ನೊಂದ ರೈತರು ಒಕ್ಕಣೆ ಮಾಡಿರುವ ಪತ್ರ ಮಾದರಿಯ ಕರಪತ್ರ ಇದಾಗಿದ್ದು, ತಮಗಾಗಿರುವ ನೋವನ್ನು ರೈತರು ತೋಡಿಕೊಂಡಿದ್ದಾರೆ. ನಾನಾ ಕಾರಣಗಳಿಂದ 350 ಎಕರೆ ಅರಣ್ಯ ಪ್ರದೇಶ ಎಂದು ಕೈಬಿಟ್ಟು ಬಾಕಿ ಜಮೀನಿಗೆ ಹಣಕೊಟ್ಟು ಯಡಿಯೂರಪ್ಪನವರು ಅಂತಿಮಗೊಳಿಸಿ ನಿಮಗೂ ವ್ಯವಸ್ಥೆ ಮಾಡುತ್ತೇನೆ ಎನ್ನುವಷ್ಟರಲ್ಲಿ ಅವರು ಅಧಿಕಾರದಿಂದ ಕೆಳಗೆ ಇಳಿದರು. ನಂತರ ಬಂದ ಡಿಸಿಎಂ ಈಶ್ವರಪ್ಪನವರ ಬಳಿ ಹೋಗಿ ನಮ್ಮ ಕಷ್ಟಗಳನ್ನು ಹೇಳಿದರೆ ಯಾರು ವಶಪಡಿಸಿಕೊಂಡರೋ ಅವರ ಬಳಿ ಹೋಗಿ ಎಂದು ಹಾಗೂ ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ನೀವು ಬರುವುದಿಲ್ಲ ಎಂದರು.
ತುರ್ತು ಇಲಾಖೆ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸಬೇಡಿ
ಬೀರೂರು: ವಿಧಾನಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ತುರ್ತು ಸೇವೆಗಳಲ್ಲಿರುವ ಸಿಬ್ಬಂದಿಯನ್ನು ನಿಯೋಜಿಸದೆ ಇಲಾಖೆ ಸೇವೆಯಲ್ಲಿ ಮುಂದುವರಿಯಲು ಅನುವು ಮಾಡಿಕೊಡಬೇಕು ಎಂದು ನಾಗರಿಕರು ಚುನಾವಣಾ ಆಯೋಗಕ್ಕೆ ಅಗ್ರಹಿಸಿದ್ದಾರೆ.
ಪಶು ಸಂಗೋಪನಾ ಇಲಾಖೆಯಲ್ಲಿ ಒಬ್ಬರೇ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ಅವರನ್ನು ತಿಂಗಳುಗಟ್ಟಲೆ ಚುನಾವಣೆ ನಿಮಿತ್ತ ಕೆಲಸಕ್ಕೆ ನಿಯೋಜಿಸಿದರೆ ಲಕ್ಷಾಂತರ ರು. ಮೌಲ್ಯದ ಜಾನುವಾರುಗಳಿಗೆ ಚಿಕಿತ್ಸೆ ನೀಡುವವರು ಯಾರು, ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು ಎಂದು ರೈತರು ಪ್ರಶ್ನಿಸಿದ್ದಾರೆ.
ಸರ್ಕಾರ ಇತ್ತ ಗಮನಹರಿಸಿ ರೈತರಿಗೆ ಜೀವನಾಡಿಯಾಗಿರುವ ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡಬೇಕು.
ಪಶು ಸಂಗೋಪನಾ ಇಲಾಖೆ, ಕಂದಾಯ ಇಲಾಖೆ, ಪುರಸಭೆ ಮತ್ತು ತುರ್ತುಸೇವೆ ಸಲ್ಲಿಸುತ್ತಿರುವ ಇಲಾಖೆಗಳನ್ನು ಗುರುತಿಸಿ ಚುನಾವಣಾ ಕೆಲಸಕ್ಕೆ ನಿಯೋಜಿಸಬಾರದು ಎಂದು ಕೃಷಿಕರು ಒತ್ತಾಯಿಸಿದ್ದಾರೆ.