ಅಕ್ರಮ ತಡೆಗೆ ಪಕ್ಷಗಳಿಂದಲೇ ಕಾವಲು ಸಮಿತಿ
ಕ.ಪ್ರ.ವಾರ್ತ್ಣೆ ಚಿಕ್ಕಮಗಳೂರ್ಣು ಏ.8
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್ಲರ ಕಣ್ಣು ಚಿಕ್ಕಮಗಳೂರು ಕ್ಷೇತ್ರದ ಮೇಲೆ. ಕಾರಣ- ಬಿಜೆಪಿಯ ಪ್ರಭಾವಿ ನಾಯಕರಲ್ಲಿ ಓರ್ವರಾದ ಸಿ.ಟಿ. ರವಿ ಅವರು ಈ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದರ ಜತೆಗೆ ಈ ಬಾರಿ ಮತ್ತೊಂದು ವಿಶೇಷ- ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲಿರುವ ಅಭ್ಯರ್ಥಿಗಳು ಮತದಾರರಿಗೆ ಹಣ, ಹೆಂಡ ಹಂಚುವುದಿಲ್ಲ ಎಂದು ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
ಆರೋಪ- ಪ್ರತ್ಯಾರೋಪ: 2008ರ ವಿಧಾನಸಭಾ ಚುನಾವಣೆಯ ನಂತರದಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ದ್ವೇಷದ ರಾಜಕಾರಣ ನಡೆಯುತ್ತಿದೆ. ಆರೋಪ- ಪ್ರತ್ಯಾರೋಪಗಳು ಮೆಗಾ ಸಿರಿಯಲ್ ರೀತಿ ಒಂದರ ನಂತರ ಮತ್ತೊಂದು ಮಾಧ್ಯಮದ ಮೂಲಕ ಸಾರ್ವಜನಿಕರ ಗಮನಕ್ಕೆ ಬರುತ್ತಿವೆ. ಇದು, ಈ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಸ್ಪೋಟಗೊಳ್ಳುತ್ತಿದೆ.
ಕಣ್ಗಾವಲು ಸಮಿತಿ: ಸಿರಿಗೆರೆ ಶ್ರೀಗಳ ಸಲಹೆಯಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು 21 ಜನರ ಕಾವಲು ಸಮಿತಿಯನ್ನು ರಚನೆ ಮಾಡಿಕೊಂಡಿವೆ.
ಈ ಸಮಿತಿಗಳು ಬೇರೆ ಪಕ್ಷಗಳ ಅಕ್ರಮಗಳ ಮೇಲೆ ಕಣ್ಣಿಟ್ಟಿವೆ. ಜಿಲ್ಲಾಡಳಿತದ ಕಣ್ಗಾವಲು ಸಮಿತಿಯ ಕಣ್ಣು ತಪ್ಪಿಸಿ ಅಕ್ರಮವಾಗಿ ಮದ್ಯ, ಸೀರೆ ಹಾಗೂ ಇತರೆ ವಸ್ತುಗಳನ್ನು ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹ ಮಾಡಿರುವ ಬಗ್ಗೆ ಕಣ್ಣಲ್ಲಿ ಕಣ್ಣಿಟ್ಟು ವಾಚ್ ಮಾಡುತ್ತಿವೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಳಸಾಪುರದ ಮನೆಯೊಂದರಲ್ಲಿ ಇಟ್ಟಿದ್ದ ಸುಮಾರು 10 ಲಕ್ಷ ರುಪಾಯಿ ಮೌಲ್ಯದ ಮದ್ಯವನ್ನು ಜೆಡಿಎಸ್ನ ಕಣ್ಗಾವಲು ತಂಡ ಪತ್ತೆ ಹಚ್ಚಿ ಅದನ್ನು ಪೊಲೀಸರಿಗೆ ತಲುಪಿಸುವ ಕೆಲಸ ಮಾಡುವಲ್ಲಿ ಯಶಸ್ವಿಯಾಯಿತು.
ಸೀರೆಗಳು ವಶ: ಚಿಕ್ಕಮಗಳೂರು ತಾಲೂಕಿನ ಅರಶಿನಗುಪ್ಪೆಯ ಲಕ್ಷ್ಮಣಗೌಡ ಅವರ ಮನೆಯಲ್ಲಿ ಎರಡು ಮೂಟೆಯಲ್ಲಿಟ್ಟಿದ್ದ ಸೀರೆಗಳನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭಾನುವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಲಕ್ಷ್ಮಣಗೌಡ ಅವರು ಪೊಲೀಸರಿಗೆ ಲಿಖಿತವಾಗಿ ನೀಡಿರುವ ದೂರಿನಲ್ಲಿ ಹೇಳಿದಂತೆ, ಭಾನುವಾರ ರಾತ್ರಿ ಕರೆಂಟ್ ಹೋಗಿತ್ತು. ಆಗ ಬಿಜೆಪಿಯವರು ಪ್ರಚಾರಕ್ಕೆ ಬಂದಿದ್ದ ವೇಳೆಯಲ್ಲಿ ಜೀಪ್ ಪಂಚರ್ ಆಗಿದೆ ಎಂದು ಹೇಳಿ ಎರಡು ಮೂಟೆಗಳನ್ನು ತಮ್ಮ ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದು, ರಾತ್ರಿ ಪೊಲೀಸರು ಮನೆಯ ಬಾಗಿಲು ತಟ್ಟಿದ್ದು, ಹೊರ ಬಂದು ಕೇಳಿದಾಗ, ತಾವು ಪೊಲೀಸರು ಎಂದು ಹೇಳಿದ್ದು, ದನದ ಕೊಟ್ಟಿಗೆಯ ಬೀಗ ತೆಗೆದು ನೋಡಿದಾಗ ಆ ಚೀಲಗಳಲ್ಲಿ ಸೀರೆಗಳಿರುವುದು ಕಂಡು ಬಂದಿತ್ತೆಂದು ಹೇಳಿದ್ದಾರೆ.
ಒಂದು ಚೀಲದಲ್ಲಿ 100 ರಂತೆ ಎರಡು ಚೀಲದಲ್ಲಿ 200 ಸೀರೆಗಳು ಪತ್ತೆಯಾಗಿವೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಲಕ್ಷ್ಮಣಗೌಡ ವಿರುದ್ಧ ಪ್ರಕರಣ ದಾಖಲು ಮಾಡಿ, ಸೀರೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಿ.ಟಿ. ರವಿ ಹೊಣೆ: ಬಿಜೆಪಿಗೆ ಸೇರಿದ ಅಕ್ರಮ ಮದ್ಯ ಮತ್ತು ಸೀರೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇದರ ಹೊಣೆಯನ್ನು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರು ಹೊರಬೇಕು ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಲ್. ಭೋಜೇಗೌಡ ಆಗ್ರಹಿಸಿದ್ದಾರೆ. ಬಿಜೆಪಿಯ ಪ್ರತಿಯೊಂದು ಅಕ್ರಮವನ್ನು ದಾಖಲೆ ಸಹಿತ ಸಿರಿಗೆರೆ ಶ್ರೀಗಳಿಗೆ ಪ್ರತಿದಿನ ಮುಟ್ಟಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಾಡೂಟದ ವ್ಯವಸ್ಥೆ: ಕ್ಷೇತ್ರದಲ್ಲಿ ಎಲ್ಲಲ್ಲಿ ಬಿಜೆಪಿ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದಿಯೋ ಅಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಇತರೆ ಸಂಬಂಧಿತ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗುವ ಕೆಲಸ ಜೆಡಿಎಸ್ ಮಾಡುತ್ತಿದೆ.
ನಗರದ 9ನೇ ವಾರ್ಡ್ನಲ್ಲಿ ಬಿಜೆಪಿ ನಗರಸಭಾ ಸದಸ್ಯರು ಮತದಾರರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದರು. ಸಖರಾಯಪಟ್ಟಣದಲ್ಲಿ ನಡೆದ ಬಿಜೆಪಿಯ ಸಮಾವೇಶದಲ್ಲಿ ಹಣ ಹಂಚಿದ್ದಾರೆ. ಬೀಕನಹಳ್ಳಿಯಲ್ಲಿ ಊಟದ ವ್ಯವಸ್ಥೆ ಮಾಡಿದ್ದರು.
200 ಕಾರ್ಯಕರ್ತರು: ಬೆಳವಾಡಿಯಲ್ಲಿ ರವಿ ಎಂಬುವವರಿಗೆ ಸೇರಿದ ಟಾಟಾ ಏಸ್ ಕಾರಿನಲ್ಲಿ ಸೀರೆಗಳಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಿಜೆಪಿಯ ಚುನಾವಣಾ ಅಕ್ರಮ ತಡೆಯಲು ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ನ 200 ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
ಈ ಎಲ್ಲಾ ಪ್ರಕರಣಗಳ ನೇರ ಹೊಣೆಯನ್ನು ಸಚಿವ ಸಿ.ಟಿ. ರವಿ ಅವರು ಹೊರಬೇಕು ಎಂದು ಹೇಳಿದರು.
ಚುನಾವಣೆಯ ವೇಳೆಯಲ್ಲಿ ಜೆಡಿಎಸ್ ಮದ್ಯ, ಸೀರೆ ಸೇರಿದಂತೆ ಇತರೆ ವಸ್ತುಗಳನ್ನು ಹಂಚಲು ಸಂಗ್ರಹ ಮಾಡಿದ್ದರೆ, ಬಿಜೆಪಿಯವರು ಪತ್ತೆ ಹಚ್ಚಿದ್ದೇ ಆದರೆ, ಅದರ ಹೊಣೆಯನ್ನು ತಾವು ಹೊರಲು ಸಿದ್ಧವಿರುವುದಾಗಿ ಹೇಳಿದ ಭೋಜೇಗೌಡ, ಮತದಾರರಿಗೆ ಹಂಚಲು ಮದ್ಯ, ಸೀರೆಗಳನ್ನು ಎಲ್ಲಾದರೂ ಇಟ್ಟಿದ್ದರೆ, ಅಲ್ಲೇ ಅವುಗಳನ್ನು ರದ್ದುಪಡಿಸುವ ಕೆಲಸವನ್ನು ಬಿಜೆಪಿಯವರು ಮಾಡಲಿ, ಇಲ್ಲದೆ ಹೋದರೆ, ಅವುಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಜೆಡಿಎಸ್ ಪಕ್ಷ ಮಾಡುತ್ತದೆ. ನಿರ್ಭೀತವಾದ ವಾತಾವರಣದಲ್ಲಿ ಚುನಾವಣೆ ನಡೆಸಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಿಲ್ಲಾಡಳಿತ ಹೋಬಳಿವಾರು ಅಧಿಕಾರಿಗಳ ಕಣ್ಗಾವಲು ತಂಡ ರಚನೆ ಮಾಡಿದೆ.
ಈ ತಂಡದಲ್ಲಿ ಕಳೆದ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಇದ್ದಾರೆ.
ಅವರು ಜೆಡಿಎಸ್ ದಾಳಿ ನಡೆಸುವ ಬಗ್ಗೆ ಪೂರ್ವದಲ್ಲಿಯೇ ಸಂಬಂಧಪಟ್ಟವರಿಗೆ ಮಾಹಿತಿ ನೀಡುತ್ತಿರುವ ಬಗ್ಗೆ ನಮಗೆ ಅನುಮಾನ ಇದೆ. ಅದುದರಿಂದ ಕಣ್ಗಾವಲು ತಂಡದಲ್ಲಿರುವ ಅಧಿಕಾರಿಗಳನ್ನು ಬದಲಾಯಿಸಿ, ಬೇರೆ ತಾಲೂಕುಗಳ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.