ಅಪಹರಣ ಆರೋಪಿಗಳಿಗೆ ಸಜೆ
ಕಪ್ರ ವಾರ್ತೆ, ಚಿಕ್ಕಮಗಳೂರು, ಏ.8
ಯುವತಿಯನ್ನು ಮದುವೆಯಾಗುವ ಉದ್ದೇಶದಿಂದ ಬಲಾತ್ಕಾರವಾಗಿ ಅಪಹರಿಸಿದ ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
2012ರ ಮಾರ್ಚ್ 15 ರಂದು ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಮಾಗುಂಡಿ ಗ್ರಾಮದಲ್ಲಿ ಶಾಲಿನಿ ತನ್ನ ಚಿಕ್ಕಮ್ಮ ಶಕುಂತಳಾ ಹಾಗೂ ಚಿಕ್ಕಮ್ಮನ ಮಗಳು ಸಹನಾಳೊಂದಿಗೆ ಬೈಕಿನಲ್ಲಿ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಆರೋಪಿತರಾದ ಅಜಿತ್ ಮತ್ತು ಸಂಗಡಿಗರು ಬೈಕ್ ತಡೆದು, ಶಾಲಿನಿಯನ್ನು ಬಲವಂತವಾಗಿ ಕೆಳಗಿಳಿಸಿ, ಮದುವೆಯಾಗುವ ಉದ್ದೇಶದಿಂದ ಮಾರುತಿ ಕಾರಿನಲ್ಲಿ ಅಪಹರಣ ಮಾಡಿದ್ದರು.
ಅಲ್ಲದೆ ಆಸಂಧರ್ಭದಲ್ಲಿ ಬಿಡಿಸಲು ಬಂದ ಶಕುಂತಳಾ ಅವರನ್ನು ತಳ್ಳಿ ಎಳೆದಾಡಿ ಹೊಡೆದು ಮಾನಭಂಗಕ್ಕೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಎ. ಪಾಟೀಲ್ ಅವರು, ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗಳಾದ ಎ.ಎಸ್. ಅಜಿತ್, ಎ.ಎಸ್. ಅರ್ಚನ, ಎನ್.ಕೆ. ಆದರ್ಶ, ಕೆ.ವಿ. ಪ್ರದೀಪ, ಕೆ.ಕೆ. ಗೌತಮ, ಎ.ಸಿ. ಶಂಕರ್ ಯಾನೆ ಶಂಕರಪ್ಪಗೌಡ ಇವರಿಗೆ 5 ವರ್ಷ ಸಜೆ ಹಾಗೂ ವಿವಿಧ ಕಲಂಗಳಡಿ ಒಟ್ಟು 3 ಲಕ್ಷ ರುಪಾಯಿ ದಂಡ ವಿಧಿಸಿದ್ದಾರೆ.
ದಂಡದ ಮೊತ್ತದಲ್ಲಿ 1.50 ಲಕ್ಷ ರು.ಶಾಲಿನಿಗೆ ಹಾಗೂ ತಲಾ 35 ಸಾವಿರ ಗಳನ್ನು ಶಕುಂತಳಾ ಮತ್ತು ಸಹನಾ ಇವರಿಗೆ ಪರಿಹಾರ ರೂಪವಾಗಿ ನೀಡುವಂತೆ ಸೋಮವಾರ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಿ.ಆರ್. ಉಪಾಧ್ಯೆ ಮೊಕದ್ದಮೆಯನ್ನು ನಡೆಸಿದ್ದರು.