ಅಭಿಮಾನಿಗಳು ಸೂಚಿಸುವ ಪಕ್ಷದಿಂದ ಸ್ಪರ್ಧೆ
ಕ.ಪ್ರ.ವಾರ್ತೆ, ಕಡೂರು, ಏ.8
ಉದ್ದೇಶಪೂರ್ವಕವಾಗಿ ನನಗೆ ಟಿಕೆಟ್ ತಪ್ಪಿಸಿ ಪಕ್ಷದ್ರೋಹ ಮಾಡಿ ಕಳೆದ ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದ ಕೆ.ಬಿ. ಮಲ್ಲಿಕಾಜುನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಈ ನಿಟ್ಟಿನಲ್ಲಿ ನನ್ನ ಕಾರ್ಯಕರ್ತರ ಅಪೇಕ್ಷೆಯಂತೆ ಚುನಾವಣೆಯ ಕಣಕ್ಕಿಳಿದು ಸೂಕ್ತ ಉತ್ತರ ನೀಡುತ್ತೇನೆ ಎಂದು ಕಾಂಗ್ರೆಸ್ ತೊರೆದಿರುವ ಮಾಜಿ ಜಿಪಂ ಅಧ್ಯಕ್ಷ ಕೆ.ಎಂ. ಕೆಂಪರಾಜು ಹೇಳಿದರು.
ಅವರು ಕಾಂಗ್ರೆಸ್ ತೊರೆದ ನಂತರ ಕಡೂರು ಪಟ್ಟಣದ ಎಂ.ಆರ್.ಎಂ. ರಂಗಮಂದಿರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಳೆದ ಮೂರು ವರ್ಷಗಳ ಬಿಜೆಪಿ ಆಡಳಿತ ಮತ್ತು ಜೆಡಿಎಸ್‌ನ ದತ್ತರವರನ್ನು ನೋಡಿದ್ದೀರಿ. ಆ ಮೂಲಕ ನಿಮ್ಮ ಅಭಿಪ್ರಾಯ ಹಾಗೂ ಆಜ್ಞೆಯಂತೆ ನಾನು ಪಕ್ಷೇತರ ಅಥವಾ ನೀವು ಸೂಚಿಸುವ ಪಕ್ಷದಿಂದ ಕಡೂರು ವಿಧಾನಸಭಾ ಚುನಾವಣೆ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ತಾವು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ನಿರೀಕ್ಷೆಗೂ ಮೀರಿ ಜನ: ದಿ. ಕೆ.ಎಂ. ಕೃಷ್ಣಮೂರ್ತಿಯವರ ಪುತ್ರ ಶರತ್ ಕೃಷ್ಣಮೂರ್ತಿ ಮಾತನಾಡಿ, ಈ ಸಭೆಯ ಸಂದೇಶ ಯಾರಿಗೆ ತಲುಪಬೇಕೋ ಅವರಿಗೆ ತಲುಪಿದೆ. ಮುಂದಿನ ನಡೆ ಕುರಿತು ಅಭಿಪ್ರಾಯ ನೀಡಿ ನಮಗೆ ಆಶೀರ್ವದಿಸಬೇಕು ಎಂದರು.
ಮುಖಂಡ ಹೈದರ್ ಖಾನ್, ಶೆಟ್ಟಿಹಳ್ಳಿ ಮಲ್ಲಿಕಾರ್ಜುನ್, ಪುರದಪ್ಪ ಮಾತನಾಡಿ, ಕೆ.ಎಂ.ಕೆ. ಅಧಿಕಾರದಲ್ಲಿದ್ದಾಗ ಯಾವುದೇ ಜಾತಿ ಅಥವಾ ಕೋಮು ಸಂಘರ್ಷ ನಡೆದಿಲ್ಲ. ಕ್ಷೇತ್ರದ ಅಭಿವೃದ್ದಿ ಚಿಂತನೆ ನಡೆಸುತ್ತಿದ್ದ ಕೆ.ಎಂ.ಕೆ. ಯಂತೆ ಕೆಂಪರಾಜು ಕೂಡ ಜನರ ಹೃದಯಕ್ಕೆ ಹತ್ತಿರವಾದ ವ್ಯಕ್ತಿಯಾಗಿದ್ದರು ಎಂದರು.
ಮುಖಂಡ ಹಳೇಪೇಟೆ ಕುಮಾರ್, ಕೋಳಿ ಮೂರ್ತಿ, ಗರ್ಜೆ ಮರುಳಪ್ಪ, ಶಿವನಾಯ್ಕ, ತಿಮ್ಮಯ್ಯ, ನಿಡವಳ್ಳಿ ಕರಿಯಪ್ಪ, ನರಸೀಪುರ ರಮೇಶ್, ಸುರೇಶ್, ತಿಮ್ಮಯ್ಯ, ಹೈದರ್ ಖಾನ್, ಸಿದ್ದಪ್ಪ, ಓಂಕಾರಪ್ಪ, ತಂಗಲಿ ಚಂದ್ರಶೇಖರ್, ಸಿದ್ದೇಶ್, ಭರತ್, ರವಿ, ಚೇತನ್, ರಾಜು, ಆಟೋ ಚಂದ್ರು, ಸುರೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದರು.