ಒಳ ಮೀಸಲಾತಿ ಅಂಗೀಕಾರಕ್ಕೆ ಆಗ್ರಹಿಸಿ ಧರಣಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.8
ಪರಿಶಿಷ್ಟ ಜಾತಿಯ ಒಳ ಮೀಸಲಾತಿಗಾಗಿ ಸಂವಿಧಾನದ 368ರ ಅಡಿಯಲ್ಲಿ ಸಂವಿಧಾನದ ಪರಿಚ್ಛೇದ 341(3) ರ ತಿದ್ದುಪಡಿ ಮಸೂದೆಯನ್ನು ಲೋಕಸಭಾ ಅಧಿವೇಶನದಲ್ಲಿ ಅಂಗೀಕರಿಸುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.
ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಿ.ಟಿ. ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ದೇಶದಲ್ಲಿ ನಮ್ಮನಾಳಿದ ಸರ್ಕಾರಗಳು, ಪಟ್ಟಭದ್ರ ಹಿತಾಶಕ್ತಿಗಳು ನಮ್ಮ ಮೇಲೆ ಮನು ಸಂಸ್ಕೃತಿ ಹೇರಿ ದಲಿತರ ಮೇಲೆ ಒಂದಿಲ್ಲೊಂದು ರೀತಿ ದೌರ್ಜನ್ಯ ನಡೆಸುತ್ತಾ ಬಂದಿದೆ. ಸಂವಿಧಾನದಲ್ಲಿ ಶೇ.18ರಡಿಯಲ್ಲಿನ ಮೀಸಲಾತಿಯಲ್ಲಿ ಮಾದಿಗ ಜನಾಂಗಕ್ಕೆ ಸಿಗಬೇಕಾದ ಸೌಲಭ್ಯಗಳಲ್ಲಿ ವಂಚಿತರಾಗಿದ್ದಾರೆ.
ಮೀಸಲಾತಿ ವರದಿ: ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಒಳ ಮೀಸಲಾತಿಗಾಗಿ 1996ನೇ ಸಾಲಿನಿಂದ ಇಂದಿನವರೆಗೂ ಕರ್ನಾಟಕದ ಮಾದಿಗ ಸಮುದಾಯ ಹೋರಾಟ ಮಾಡಿಕೊಂಡು ಬಂದಿದೆ. ಅದರ ಫಲವಾಗಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಸುಮಾರು 7 ವರ್ಷಗಳ ಕಾಲ ರಾಜ್ಯದ ಮೂಲೆ ಮೂಲೆಯಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಿ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಆಯಾ ಜಾತಿಗಳಿಗೆ ಶೇಕಡವಾರು ಮೀಸಲಾತಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ.
ಅದು ಇದುವರೆಗೂ ಜಾರಿಯಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಲು ಕೇಂದ್ರಕ್ಕೆ 2012ರ ಜ.21ರಂದು ಸಂವಿಧಾನದ 368ರ ಆಧಾರದ ಮೇಲೆ ಸಂವಿಧಾನ ಪರಿಚ್ಛೇದ 341(3) ತಿದ್ದುಪಡಿ ಮಾಡಬೇಕೆಂದು ಪತ್ರದ ಮೂಲಕ ತಿಳಿಸಿದರೂ ಕೂಡ ಜಾರಿಗೆ ತಂದಿರುವುದಿಲ್ಲ.
ಈ ಮಸೂದೆಯನ್ನು ಲೋಕಸಭಾ ಅಧಿವೇಶನದಲ್ಲಿ ಅಂಗೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಡೂರಿನ ಡಿಎಸ್‌ಎಸ್ ಸಂಚಾಲಕ ಶೂದ್ರ ಶ್ರೀನಿವಾಸ್, ವೈ.ಟಿ. ಗೋವಿಂದಪ್ಪ, ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ನಾರಾಯಣಮೂರ್ತಿ ಹಾಗೂ ಹೋರಾಟ ಸಮಿತಿಯವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.