ಕಾಂಗ್ರೆಸ್ಗೆ ಜನತೆ ಆಶೀರ್ವಾದ
ಕ.ಪ್ರ.ವಾರ್ತೆ, ನರಸಿಂಹರಾಜಪುರ, ಏ.8 ಬಿಜೆಪಿಯ 8 ವರ್ಷದ ದುರಾಡಳಿತದಿಂದ ಬೇಸತ್ತ ಮತದಾರರು ಕಾಂಗ್ರೆಸ್ ಕಡೆಗೆ ಒಲವು ತೋರುತ್ತಿದ್ದಾರೆ. ಆದ್ದರಿಂದ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಪಣ ತೊಡಬೇಕಾಗಿದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಸಲಹೆ ನೀಡಿದರು.
ಅವರು ಪಟ್ಟಣದ ಕನ್ಯಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ಕಾಂಗ್ರೆಸ್ ನಗರ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸುವ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಣ್ಣಪುಟ್ಟ ಗೊಂದಲ: ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಇರುವಂತೆ ಕಾಂಗ್ರೆಸ್ನಲ್ಲಿಯೂ ಸಣ್ಣಪುಟ್ಟ ಗೊಂದಲ ಇರಬಹುದು. ಅದನ್ನು ಸರಿಪಡಿಸಿಕೊಂಡು ಬಿಜೆಪಿ ಸೋಲಿಸೋಣ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಈ ಚುನಾವಣೆಯಲ್ಲಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಕೆ.ಎಂ. ಗಂಗಾಧರ್ ಮಾತನಾಡಿ, ಕಾಂಗ್ರೆಸ್ಗೆ ಕಾರ್ಯಕರ್ತರೇ ಆಸ್ತಿಯಾಗಿದ್ದಾರೆ.
ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಘೋಷಣೆ ಆಗುವುವರೆಗೆ ಸಣ್ಣ ಪುಟ್ಟ ಗೊಂದಲಗಳಿದ್ದದ್ದು ಸಹಜ. ಟಿಕೆಟ್ ಆಕಾಂಕ್ಷಿಗಳೂ ಸಹ ಇದ್ದರು. ಇನ್ನು ಮುಂದೆ ಟಿ.ಡಿ. ರಾಜೇಗೌಡರ ಗೆಲುವಿಗೆ ಶ್ರಮಿಸೋಣ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್. ಚೆನ್ನಕೇಶವ ಮಾತನಾಡಿ, ಚುನಾವಣೆಯಲ್ಲಿ ಸೋಲು, ಗೆಲವು ಸಹಜ. ಕಳೆದ 8 ವರ್ಷದಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಈಗ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದ್ದು, ಇದನ್ನು ಮತವಾಗಿ ಪರಿವರ್ತಿಸೋಣ ಎಂದರು.
ಜನರ ಬಾವನೆಗೆ ಬೆಲೆ: ಜಿಲ್ಲಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಆರ್. ಸದಾಶಿವ, ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ನಂತರ ಕಾರ್ಯಕರ್ತರ, ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಈಗಾಗಲೇ ಕಳೆದ 8 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ನೋವು ಅನುಭವಿಸಿದ್ದಾರೆ. ಮುಂದೆ ಒಗ್ಗಟ್ಟಿನ ಮಂತ್ರ ಜಪಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸೋಣ ಎಂದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕೆ.ವಿ. ವಸಂತ್ ಕುಮಾರ್ಕಾರ್ಯಕ್ರಮ ಉದ್ಧಾಟಿಸಿದರು.
ಪಕ್ಷದ ಮುಖಂಡರಾದ ಮೀನಾಕ್ಷಿ ಕಾಂತರಾಜ್, ಟಿ.ವಿ. ರಾಜು, ಮಹಮ್ಮದ್ ಇಪ್ತೀಕರ್ ಆದಿಲ್, ಎಸ್.ಡಿ. ರಾಜೇಂದ್ರ, ಇ.ಸಿ. ಶೇವಿಯಾರ್, ಬಿ.ಎಸ್. ಸುಬ್ರಮಣ್ಯ, ಶಿವಶಂಕರ್, ಪಪಂ ಚುನಾವಣೆಯಲ್ಲಿ ವಿಜಯ ಗಳಿಸಿದ ಅಭ್ಯರ್ಥಿಗಳಾದ ಲೇಖಾವಸಂತ್,ಅಂಜುಮನ್, ಪಿ.ಆರ್. ಸುಕುಮಾರ್, ಲಕ್ಷ್ಮಣಶೆಟ್ಟಿ ಹಾಗೂ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಉಪಸ್ಥಿತರಿದ್ದರು.
ಜುಬೇದ ಪ್ರಾರ್ಥಿಸಿದರು. ಶೇವಿಯಾರ್ ನಿರೂಪಿಸಿದರು.