ಮತ ಮಾರಿಕೊಳ್ಳಬೇಡಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.8
ಒಂದು ಸಾವಿರ ರುಪಾಯಿಗೆ ವೋಟು ಮಾರಿಕೊಂಡು ಕ್ಷಣಿಕ ಸುಖದ ಆಸೆಗೆ ಮತದಾರ ಮುಂದಾದರೆ ಸತತ ಐದು ವರ್ಷಗಳ ಕಾಲ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಹೇಳಿದ್ದಾರೆ.
ಶಿರವಾಸೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಗರ ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಗೊಬ್ಬರ ಕೇಳಿದ ರೈತನಿಗೆ ಗುಂಡೇಟು, ಪ್ರಜೆಗಳ ದೇವಸ್ಥಾನದಲ್ಲಿ ಬ್ಲೂಫಿಲಂ ವೀಕ್ಷಣೆ, ಆಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವ ಬುಡಮೇಲು, ಎಗ್ಗಿಲ್ಲದ ಭ್ರಷ್ಟಾಚಾರದಿಂದ ಶಾಸಕರಾದಿಯಾಗಿ ಮುಖ್ಯಮಂತ್ರಿವರೆಗೂ ಜೈಲಿಗೆ ಹೋಗಿದ್ದು ಬಿಜೆಪಿಯ 5 ವರ್ಷದ ಸಾಧನೆ ಎಂದರು.
ಇಂತಹ ಮಹತ್ಕಾರ್ಯಗಳಿಂದ ಯಾವುದೇ ಪಕ್ಷದ ರಾಜಕಾರಣಿಗಳ ಬಗ್ಗೆ ಜನರು ನಂಬಿಕೆ ಕಳೆದುಕೊಂಡು ಛೀಮಾರಿ ಹಾಕುವ ಪರಿಸ್ಥಿತಿ ತಲೆದೋರಿರುವುದು ನಾಚಿಕೆ ಸಂಗತಿ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಹೊಂದಾಣಿಕೆ ವಿಶ್ವಾಸ: ಬಾಯಲ್ಲಿ ಮುತ್ತಿನಂತ ಮಾತಾಡಿ ಮೊಸಳೆ ಕಣ್ಣೀರು ಸುರಿಸುತ್ತಾ ಬಡವರನ್ನು ಉದ್ಧಾರ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ನಿಮ್ಮ ಬಳಿ ಬರುತ್ತಾರೆ. ಅವರನ್ನು ಮೂಲೆಗೆ ತಳ್ಳುವ ಕೆಲಸ ಮತದಾರರು ಮಾಡಬೇಕು ಎಂದರು.
ಭಾರತ ಕಮ್ಯುನಿಸ್ಟ್ ಪಕ್ಷ, ಜೆಡಿಎಸ್ ಪಕ್ಷ ಎರಡು ಜಾತ್ಯಾತೀತ ಮನೋಭಾವ ಹೊಂದಿರುವಂತದ್ದು. ಈ ಸಂಬಂಧ ಸಿಪಿಐ ಮುಖಂಡರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಹೊಂದಾಣಿಕೆಯಾಗುವ ವಿಶ್ವಾಸವಿದೆ. ಆ ಪಕ್ಷದ ಕಾರ್ಯಕರ್ತರು ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಲ್. ಭೋಜೇಗೌಡ ಮಾತನಾಡಿ, ಕಾಂಗ್ರೇಸ್ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಗೆ ವ್ಯಾವಹಾರಿಕ ಸಂಬಂಧಗಳಿವೆ. ಇವರಿಬ್ಬರು ಒಂದೇ ನಾಣ್ಯದ 2 ಮುಖಗಳು. ಗಾಯಿತ್ರಿ ಶಾಂತೇಗೌಡರು ವಿಧಾನಪರಿಷತ್ ಸದಸ್ಯರಾದ ನಂತರ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತದ ಉದಾಹರಣೆಗಳು ಇಲ್ಲ. ಬಿಜೆಪಿಯ ಇನ್ನೊಂದು ಮುಖವೇ ಕಾಂಗ್ರೆಸ್ ಅಭ್ಯರ್ಥಿ ಎಂದು ಆರೋಪಿಸಿದರು.
ದಯನೀಯ ಪರಿಸ್ಥಿತಿ: ಕ್ಷೇತ್ರದಲ್ಲಿ ಜೆಡಿಎಸ್ಗೆ ಮತವಿಲ್ಲ ಎಂದು ಅಲ್ಪಸಂಖ್ಯಾತರಿಗೆ ಗುಮ್ಮ ತೋರಿಸಿದ ಕಾಂಗ್ರೆಸ್ಸಿಗರು ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಇಂತಹ ಅಪಪ್ರಚಾರಕ್ಕೆ ಕಿವಿಗೊಡಬಾರದು. ಇಂದು ವ್ಯತಿರಿಕ್ತವಾದ ದಯನೀಯ ಪರಿಸ್ಥಿತಿಯಲ್ಲಿ ಬಿಜೆಪಿ ಇದ್ದು ರವಿ ಸೋಲಿನಂಚಿನಲ್ಲಿದ್ದಾರೆ. ನಮ್ಮ ಕಾರ್ಯಕರ್ತರು ನಿಷ್ಟೆಯಿಂದ ಕೆಲಸ ಮಾಡಿದರೆ ಗೆಲುವು ಹೊಂದಲು ಸಾಧ್ಯ ಎಂದರು.
ಪಕ್ಷದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಚ್.ಎನ್. ಕೃಷ್ಣೇಗೌಡ, ಜಿಲ್ಲಾಧ್ಯಕ್ಷ ಎಚ್.ಎಸ್. ಮಂಜಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಈಶ್ವರ್, ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್, ಹೋಬಳಿ ಅಧ್ಯಕ್ಷ ಎಸ್.ಟಿ. ರಮೇಶ್, ಜಯಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಅನಿಲ್ಕುಮಾರ್, ಮುಖಂಡರಾದ ಯು.ಡಿ. ರಮೇಶ್ ಮಾತನಾಡಿದರು. ಮಂಜೇಗೌಡ, ಈರೇಗೌಡ, ಮಲ್ಲೇಶ್, ಸಿದ್ದಿಕ್, ತಾರಾ ವೇದಿಕೆಯಲ್ಲಿದ್ದರು.