ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮತದಾರರ ಜಾಗೃತಿಗೆ ಆಂದೋಲನ

Lingaraj Badiger
Updated On : 9 Apr 2013, 11:06 am

ಚಿಕ್ಕಮಗಳೂರು: ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮಗಳನ್ನು  ಜಾರಿಗೆ ತರುತ್ತಿದೆ.
ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್)ಕಾರ್ಯಕ್ರಮದ ಅಂಗವಾಗಿ ಇದೀಗ ಚುನಾವಣೆ ದಿನಾಂಕದಂದು ಹೆಚ್ಚು ಹೆಚ್ಚು ಮಂದಿ ಮತಗಟ್ಟೆಯಡೆಗೆ ತೆರಳಲು ಜಿಲ್ಲಾಡಳಿತ ಶಾಲಾ ಮಕ್ಕಳ ಮೂಲಕ ಅಭಿಯಾನ ನಡೆಸುತ್ತಿದೆ.
ಇದರ ಅಂಗವಾಗಿ ಪೋಷಕರಿಗೆ ತಮ್ಮ ಮಕ್ಕಳ ಮೂಲಕ ಪ್ರತಿಜ್ಞಾವಿಧಿ ಬೋಧಿಸಲು ನಿರ್ಧರಿಸಲಾಗಿದೆ. ಈ  ಪ್ರಯುಕ್ತ ಜಿಲ್ಲೆಯಲ್ಲಿರುವ ಸುಮಾರು 1.65 ಲಕ್ಷ ಶಾಲಾ ಮಕ್ಕಳಿಗೆ ಪ್ರತಿಜ್ಞಾವಿಧಿ ಇರುವ ಕರಪತ್ರಗಳನ್ನು  ಜಿಲ್ಲಾಡಳಿತ ನೀಡಿದೆ. ಈಗಾಗಲೇ ಈ ಕರಪತ್ರಗಳನ್ನು ಮುದ್ರಿಸಿ, ಶಿಕ್ಷಣ ಇಲಾಖೆ ಮೂಲಕ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ತಲುಪಿಸಲಾಗಿದೆ.
ಮನೆಯಲ್ಲಿ ಪ್ರತಿಜ್ಞಾವಿಧಿ: ಈ ಕರಪತ್ರದಲ್ಲಿ ಪ್ರತಿಜ್ಞಾವಿಧಿಯೊಂದಿಗೆ ಆಯಾ ವಿದ್ಯಾರ್ಥಿಯ ಹೆಸರು, ಶಾಲೆ, ಪೋಷಕರ ಸಹಿ ಇರಲಿದೆ. ಮಕ್ಕಳು ತಮ್ಮ ಮನೆಯಲ್ಲಿಯೇ ಪಾಲಕರಿಗೆ ಈ ಪ್ರತಿಜ್ಞಾವಿಧಿ ಬೋಧಿಸಬೇಕಿದೆ. ಬಳಿಕ ಪೋಷಕರಿಂದ ಇದಕ್ಕೆ ಸಹಿ ಪಡೆಯಬೇಕು.ಸಹಿ ಹಾಕಿದ ಕರಪತ್ರವನ್ನು ವಿದ್ಯಾರ್ಥಿ ಶಾಲಾ ಶಿಕ್ಷಕರಿಗೆ ಹಿಂದಿರುಗಿಸಬೇಕು.
   ಏ.10ರೊಳಗೆ ಈ ಕಾರ್ಯಕ್ರಮ ಮುಗಿಯಲಿದೆ.
ಪ್ರತಿಜ್ಞಾವಿಧಿ ಪೂರ್ಣ ರೂಪ ಈ ರೀತಿ ಇದೆ.  ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆ ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement