ಮದ್ಯ ಹಾವಳಿ ತಡೆಗೆ ಸಂಘಟನೆಗಳ ಆಗ್ರಹ
ಕ.ಪ್ರ.ವಾರ್ತೆ, ಶೃಂಗೇರಿ, ಏ.8
ತಾಲೂಕಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಹಾವಳಿ ತಡೆಗಟ್ಟುವಲ್ಲಿ ಸಂಬಂಧಿಸಿದ ಇಲಾಖೆಗಳು ವೈಫಲ್ಯವಾಗಿವೆ ಎಂದು ದಸಂಸ ತಾಲೂಕು ಘಟಕ, ಜಯ ಕರ್ನಾಟಕ ಸಂಘಟನೆ ಆರೋಪಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟದಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಇದರಿಂದ ನೆಮ್ಮದಿ ಕಳೆದುಕೊಂಡು ಬದುಕು ಸಾಗಿಸಬೇಕಿದೆ. ಅಕ್ರಮ ಮದ್ಯ ಸಾಗಾಟಗಾರರು, ಮಾರಾಟಗಾರರರು ರಾಜರೋಷವಾಗಿ ಓಡಾಡುತ್ತಿದ್ದರೂ, ಅಬಕಾರಿ ಇಲಾಖೆ ಮಾತ್ರ ಪರೋಕ್ಷವಾಗಿ ಬೆಂಬಲಕ್ಕೆ ನಿಂತಂತಿದೆ.
ಈ ಬಗ್ಗೆ ಸಂಘಟನೆಗಳು, ಮಹಿಳಾ ಸಂಘಟನೆಗಳು ಸಾಕಷ್ಟು ಹೋರಾಟ ನಡೆಸಿದ್ದರೂ, ಇಲಾಖೆಗಳು ಎಚ್ಚೆತ್ತುಕೊಂಡಿಲ್ಲ.
ಕೂಡಲೇ ಈ ಬಗ್ಗೆ ಗಮನಹರಿಸಿ ಅಕ್ರಮ ಮದ್ಯ ಹಾವಳಿ ತಡೆಗಟ್ಟಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘಟನೆ ಪ್ರಮುಖರು ಈ ಸಂದರ್ಭದಲ್ಲಿ ತಮ್ಮ ಹೇಳಿಕೆಯಲ್ಲಿ ಈ ಮೂಲಕ ತಿಳಿಸಿದ್ದಾರೆ.