ತೆರೆದ ಕೊಳವೆ ಬಾವಿ ಮುಚ್ಚಿದ ಪಪಂ ಅಧಿಕಾರಿಗಳು
ಕ.ಪ್ರ.ವಾರ್ತೆ ಟಿ ನರಸಿಂಹರಾಜಪುರ ಟಿ ಏ.9
ಪಟ್ಟಣದ ಹಳೇ ಮಂಡಗದ್ದೆ ರಸ್ತೆಯಲ್ಲಿ ಉಪಯೋಗಿಸದ ತೆರೆದ ಕೊಳವೆ ಬಾವಿಯಿಂದ ಆಗುವ ಅಪಾಯದ ಬಗ್ಗೆ 'ಕನ್ನಡಪ್ರಭ'ದಲ್ಲಿ ಬಂದ ವರದಿ ಪರಿಣಾಮ ಒಂದೇ ದಿನದಲ್ಲಿ ಸಂಬಂಧಪಟ್ಟವರು ತೆರೆದ ಕೊಳವೆ ಬಾವಿಯನ್ನು ಮುಚ್ಚಿದ್ದಾರೆ.
ಹಳೇ ಮಂಡಗದ್ದೆ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನ ಸಮೀಪದ ರಸ್ತೆ ಬದಿಯಲ್ಲಿ ಈ ಹಿಂದೆ ಕೊಳವೆ ಬಾವಿ ತೆಗೆದು ಮೋಟಾರ್ ಅಳವಡಿಸಲಾಗಿತ್ತು. ಕುಡಿಯುವ ನೀರಿಗಾಗಿ ಟ್ಯಾಂಕ್ ಸಹ ನಿರ್ಮಿಸಲಾಗಿತ್ತು. ಕೆಲವು ತಿಂಗಳಗಳಲ್ಲೇ ನೀರು ಬತ್ತಿಹೋಗಿದ್ದರಿಂದ ಮೋಟಾರ್ ತೆಗೆಯಲಾಗಿತ್ತು. ಆದರೆ, ತೆರೆದ ಕೊಳವೆ ಬಾವಿಯನ್ನು ಹಾಗೇ ಬಿಡಲಾಗಿತ್ತು. ರಸ್ತೆ ಬದಿಯಲ್ಲೇ ತೆರೆದ ಕೊಳವೆ ಬಾವಿ ಇರುವುದರಿಂದ ಸಹಜವಾಗೇ ಮಕ್ಕಳು ಆಟವಾಡುತ್ತ ಕೊಳವೆ ಬಾವಿಗೆ ಬೀಳುವ ಅಪಾಯ ಎದುರಾಗಿತ್ತು. ಅಲ್ಲದೆ ಒಂದು ಮಗು ಬಿದ್ದು ಗಾಯವೂ ಆಗಿತ್ತು. ಈ ಬಗ್ಗೆ ಕನ್ನಡಪ್ರಭ ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಕೊಳವೆ ಬಾವಿಗೆ ಕಲ್ಲುಗಳನ್ನು ತುಂಬಿ ಮೇಲೆ ಚಪ್ಪಡಿ ಎಳೆದು ತೆರೆದ ಬಾವಿಯನ್ನು ಶಾಶ್ವತವಾಗಿ ಮುಚ್ಚಿದ್ದಾರೆ.