ಗಿರಿ ರಸ್ತೆಯಲ್ಲಿ ಪೊದೆಗಳದ್ದೆ ಸಾಮ್ರಾಜ್ಯ
ತರೀಕೆರೆ: ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಾದ ಸಮೀಪದ ಕೆಮ್ಮಣಗುಂಡಿ, ಕಲ್ಲತ್ತಿಗಿರಿ, ಅಬ್ಟೆ ಜಲಪಾತ, ಭದ್ರಾ ಅಭಯಾರಣ್ಯ ಪ್ರದೇಶಗಳ ಪ್ರಯಾಣಿಕರ ರಸ್ತೆಯ ಎರಡು ಮಗ್ಗಲುಗಳಲ್ಲಿ ಪೊದೆಗಳು ಗಿಡ ಗಂಟೆಗಳು ಭಾರಿ ಪ್ರಮಾಣದಲ್ಲಿ ಬೆಳೆದು ರಸ್ತೆ ಕಾಣದೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ರಸ್ತೆಯ ಎರಡೂ ಮಗ್ಗುಲಿನಲ್ಲಿ ದಟ್ಟವಾಗಿ ಬೆಳೆದಿರುವ ಬಾರಿ ಪೊದೆಗಳಿಂದಾಗಿ ರಸ್ತೆಗೆ ಸರಿಯಾಗಿ ಬೆಳಕು ಬೀಳದೆ, ಹಗಲಿನಲ್ಲೇ ರಸ್ತೆಯಲ್ಲಿ ಕತ್ತಲು ತುಂಬಿಕೊಳ್ಳುವುದರಿಂದ, ಪ್ರಯಾಣಿಕರ ವಾಹನಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಪ್ರವಾಸಿದಾಮದ ರಸ್ತೆಗಳು ತುಂಬಾ ತಿರುವುಗಳನ್ನು ಪಡೆದಿರುವುದರಿಂದ ವಾಹನಗಳನ್ನು ಎಚ್ಚರಿಕೆಯಿಂದ ಚಲಿಸಬೇಕು. ಪೊದೆಗಳಿಂದ ರಸ್ತೆ ಕಿರಿದಾಗುತ್ತದೆ. ವೇಗವಾಗಿ ಚಲಿಸುವ ವಾಹನಗಳಿಗೆ ತಿರುವಿನಲ್ಲಿ ಎದುರು ವಾಹನಗಳು ಬರುವುದು ಕಾಣುವುದಿಲ್ಲ. ಇದರಿಂದ ಅಫಗಾತಗಳು ಸಂಭವಿಸುವ ಸಾಧ್ಯಗಳು ಹೆಚ್ಚಾಗಿವೆ.
ತೀವ್ರ ಪರದಾಟ: ಪಟ್ಟಣದ ಹೊರ ವಲಯದ ಪ್ರವಾಸಿ ರಸ್ತೆಯಿಂದಲೇ ಪ್ರಾರಂಭವಾಗುವ ರಸ್ತೆಯ ಎರಡು ಮಗ್ಗಲುಗಳಲ್ಲಿ ಪೊದೆಗಳು, ಲಿಂಗದಹಳ್ಳಿ, ಉಡೇವ, ಕಲ್ಲತ್ತಿಗಿರಿ, ಸಂತವೇರಿ-ಹೊಸಪೇಟೆ, ಇತ್ಯಾದಿ ಗ್ರಾಮೀಣ ರಸ್ತೆಗಳ ಇಕ್ಕೆಲಗಳಲ್ಲಿ ಬೃಹದಾಕಾರವಾಗಿ ಪೊದೆಗಳು ಬೆಳೆದುನಿಂತಿವೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಬಸ್ಸು ಲಾರಿ ಇತ್ಯಾದಿ ದೊಡ್ಡ ವಾಹನಗಳು ಎದುರು ಬಂದಾಗ ಬೈಕ್ ಸವಾರರು ರಸ್ತೆಯ ಪಕ್ಕಕ್ಕೆ ಹೋದರೆ ಗಿಡಗಂಟೆಗಳು ಮುಖಕ್ಕೆ ರಾಚುತ್ತವೆ.
ಪ್ರವಾಸದ ಸಮಯ: ಇದೀಗ ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆಗಳು ಮುಗಿಯುವ ಹಂತ ತಲುಪಿದ್ದು, ಸಹಜವಾಗಿ ಪ್ರವಾಸಿ ದಾಮ, ಪುಣ್ಯಕ್ಷೇತ್ರಗಳಿಗೆ ಪ್ರವಾಸಿಗರು ಬಂದು ಹೋಗುವ ಸಮಯ. ವಿಶೇಷವಾಗಿ ಚಿಕ್ಕಮಗಳೂರು ಭಾಗದಿಂದ ಮುಳ್ಳಯ್ಯನಗಿರಿ ಮೂಲಕ ವಿವಿಧ ಪ್ರವಾಸಿದಾಮಗಳಿಗೆ ಹೋಗಿಬರುವ ವಾಹನಗಳು ಈ ರಸ್ತೆಯ ಮೂಲಕವೆ ಹಾದು ಹೋಗಬೇಕಾಗಿದೆ. ಇಂತಹ ಸಂದರ್ಭದಲ್ಲಿ ರಸ್ತೆಯೆ ಕಾಣದಂತೆ ಪೊದೆಗಳು ಬೆಳೆದಿದ್ದರೆ ವಾಹನ ಸಂಚರಿಸಲು ಕಷ್ಟ ಸಾಧ್ಯ ಎಂಬುದನ್ನು ಸಂಬಂಧಿಸಿದ ಇಲಾಖೆ ಮನಗಾಣಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
-ಅನಂತ ನಾಡಿಗ್