ಇಸ್ಲಾಂ ಸಮಿತಿ ಅಧಿಕಾರ ಸ್ವೀಕಾರ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.12
ನಗರದ ಅಂಡೆ ಛತ್ರದ ಅಂಜುಮನ್ ಇಸ್ಲಾಮಿಯ ಸಮಿತಿಯ ಆಡಳಿತ ಮಂಡಳಿಯವರು ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ನೂತನ ಅಧ್ಯಕ್ಷ ಅಕ್ಬರ್ ಅಹಮದ್, ಚುನಾವಣೆ ನಡೆದು 4 ತಿಂಗಳ ನಂತರ ಅಧಿಕಾರ ಸ್ವೀಕರಿಸುತ್ತಿರುವುದು ಕೆಲವು ತಾಂತ್ರಿಕ ದೋಷದ ಕಾರಣದಿಂದ ಎಂದು ವಿಷಾಧಿಸಿದರು.
ಸಮಿತಿಯ ಅಭಿವೃದ್ಧಿಗೆ ಮತ್ತು ಮುಸ್ಲಿಂ ಸಮುದಾಯದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯದವರ ಶ್ರೇಯೋಭಿವೃದ್ಧಿಗೆ ಈ ಸಮಿತಿಯ ವ್ಯಾಪ್ತಿಯಲ್ಲಿ ಶಕ್ತಿಮೀರಿ ಶ್ರಮಿಸುತ್ತೇನೆ. ಎಲ್ಲಾ ಚುನಾಯಿತ ಸದಸ್ಯರೊಂದಿಗೆ ವಿಶ್ವಾಸದಿಂದ ವ್ಯವಹರಿಸಿ ಹಿಂದಿನ ಆಡಳಿತದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಸಮರ್ಪಣ ಮನೋಭಾವದಿಂದ ಪಾರದರ್ಶಕತೆಯ ಸ್ವಚ್ಛವಾದ ಅಧಿಕಾರವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಅಜಂ ಮಸೀದಿಯ ಗುರುಗಳಾದ ಹಾಫೀಜ್ ಔರಂಗ್ ಸಾಬ್ ರವರು ಮಾತನಾಡಿ, ಎಲ್ಲಾ ಸಂಘಟನೆಗಳು ಏಕತೆ ಮತ್ತು ವಿಶ್ವಾಸದ ಬುನಾದಿಯಲ್ಲಿ ಕೆಲಸ ನಿರ್ವಹಿಸಬೇಕು. ಈ ಸಂಘಟನೆಯ ನೂತನ ಅಧ್ಯಕ್ಷರಾದ ಅಕ್ಬರ್ ಅಹಮದ್ ರವರು ತನ್ನ ಸೀಮಿತ ಅಧಿಕಾರ ಅವಧಿಯಲ್ಲಿ ಸಮುದಾಯದ ಸೇವೆಗಾಗಿ ಕೊಟ್ಟ ಮಾತಿನಂತೆ ಅಧಿಕಾರ ನಡೆಸಬೇಕೆಂದರು.
ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ರಫೀಕ್ ಅಹಮದ್ ಮಾತನಾಡಿದರು. ಸಮಾರಂಭದಲ್ಲಿ ಸದ್ಯಸರುಗಳಾದ ಹಾಫೀಜ್ ರಿಯಾಜ್ ಖಾನ್, ಶಿರಾಜ್ ಅಹಮದ್, ಮುಸ್ಲಿಂ ಮುಖಂದರಾದ ಶಹಬುದ್ದೀನ್, ಎಸ್.ಎಂ. ಪಾಷ, ಎಜಾಷ್ ಪಾಷ, ಸೈಪುಲ್ಲ ಉಪಸ್ಥಿತರಿದ್ದರು.