ಖಾಲಿ ಬಿದ್ದ ಮೂರು ಸರ್ಕಾರಿ ಕಟ್ಟಡಗಳು
ಕ.ಪ್ರ ವಾರ್ತೆ, ನರಸಿಂಹರಾಜಪುರ, ಏ.12
ಪಟ್ಟಣದ ಜೈಲ್ ರಸ್ತೆಯಲ್ಲಿದ್ದ ರೇಷ್ಮೆ ಇಲಾಖೆಯ ಕಟ್ಟಡ ಸೇರಿದಂತೆ ಮೂರು ಸರ್ಕಾರಿ ಕಟ್ಟಡಗಳು ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಕಳೆದ 4 ವರ್ಷದಿಂದ ಖಾಲಿ ಬಿದ್ದಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಜೈಲ್ ರಸ್ತೆಯಲ್ಲಿರುವ ರೇಷ್ಮೆ ಇಲಾಖೆ ಕಟ್ಟಡ ಕಳೆದ 4 ವರ್ಷದಿಂದ ಖಾಲಿ ಬಿದ್ದಿದೆ. ರೈತರು ರೇಷ್ಮೆ ಬೆಳೆಯುವುದು ಕಡಿಮೆಯಾದಂತೆ ಈ ಕಟ್ಟಡದಲ್ಲಿದ್ದ ರೇಷ್ಮೆ ಇಲಾಖೆಯನ್ನೇ ಮುಚ್ಚಲಾಯಿತು. ಇಲಾಖೆ ಮುಚ್ಚಿದ ನಂತರ ಈ ಕಟ್ಟಡ ಖಾಲಿ ಉಳಿದಿದ್ದು ಯಾರೂ ನಿರ್ವಹಣೆ ಮಾಡದೆ ಇರುವುದರಿಂದ ಗಿಡ, ಮಟ್ಟುಗಳು ಬೆಳೆದು ಅನೈತಿಕ ಚಟುವಟಿಕೆಯ ತಾಣವಾಗಿ ಪರಿವರ್ತನೆಯಾಗಿದೆ.
ಕಟ್ಟಡದ ಪಕ್ಕದಲ್ಲೇ ಇದ್ದ ನೀರಿನ ಟ್ಯಾಂಕ್ ಪೊದೆಗಳಿಂದ ಮುಚ್ಚಿಹೋಗಿದೆ. ಬೇಸಿಗೆ ದಿನಗಳಲ್ಲಿ ಒಣಗಿದ ಗಿಡ, ಹುಲ್ಲುಗಳಿಗೆ ಬೆಂಕಿ ತಗಲಿದರೆ ಇಡೀ ಕಟ್ಟಡವೇ ಸುಟ್ಟು ಹೋಗುವ ಅಪಾಯವಿದೆ. 4 ವರ್ಷ ಕಳೆದರೂ ಈ ಕಟ್ಟಡವನ್ನು ಬೇರೆ ಸರ್ಕಾರಿ ಕಚೇರಿಗಳಿಗೆ ಉಪಯೋಗಿಸದೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಗ್ರಂಥಾಲಯ ಕಟ್ಟಡವೂ ಖಾಲಿ: ತಾಪಂ ಎದುರು ಇದ್ದ ಗ್ರಂಥಾಲಯವನ್ನು ಪಪ ಮುಂಭಾಗದಲ್ಲಿ ದಾನಿಗಳೊಬ್ಬರು ನೀಡಿದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಇದರಿಂದಾಗಿ ಕಳೆದ 4 ವರ್ಷದಿಂದ ಆ ಕಟ್ಟಡವೂ ಖಾಲಿಯಾಗಿದೆ. ನೀರು ಸರಬರಾಜು ಕೇಂದ್ರದ ಎದರು ಇದ್ದ ಅಬಕಾರಿ ಇಲಾಖೆ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಲಾಯಿತು.
ಇದರಿಂದಾಗಿ ಆ ಕಟ್ಟಡವೂ ಖಾಲಿಯಾಗಿದೆ. ಖಾಲಿಯಾದ ಸರ್ಕಾರಿ ಕಟ್ಟಡಗಳನ್ನು ವರ್ಷಗಟ್ಟಲೆ ಹಾಳು ಬಿಟ್ಟರೆ ಇಡೀ ಕಟ್ಟಡವೇ ನಾಶವಾಗುವ ಭೀತಿ ಎದುರಾಗಲಿದೆ. ಮಳೆಗಾಲದಲ್ಲಿ ಕಟ್ಟಡವನ್ನು ನೋಡುವುವರು ಇಲ್ಲದೆ ಕಟ್ಟಡದ ಒಳಗೆ ಮಳೆ ನೀರು ಸೋತು ಗೋಡೆಗಳು ಹಾಳಾಗಲಿವೆ.
ಕೆಲವು ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ಖಾಲಿಯಾಗಿರುವ ಸರ್ಕಾರಿ ಕಟ್ಟಡಗಳಿಗೆ ಕಾಯಕಲ್ಪ ಮಾಡಿ ಸ್ವಂತ ಕಟ್ಟಡವಿಲ್ಲದ ಕಚೇರಿಗಳನ್ನು ಸ್ಥಳಾಂತರಿಸಿದರೆ ಸರ್ಕಾರಕ್ಕೆ ಬಾಡಿಗೆ ಹಣವೂ ಉಳಿಯುತ್ತದೆ. ಜೊತೆಗೆ ಹಾಳು ಬೀಳುತ್ತಿರುವ ಖಾಲಿ ಕಟ್ಟಡಗಳಿಗೆ ಪುನರ್ಜನ್ಮ ಬಂದಂತಾಗುತ್ತದೆ ಎಂಬುದು ನಾಗರಿಕರ ಅಭಿಪ್ರಾಯ.