ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕಣಕ್ಕೆ: ಕೆಂಪರಾಜು
ಕ.ಪ್ರ ವಾರ್ತೆ, ಕಡೂರು, ಏ.12
ವಿಧಾನಸಭಾ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಚುನಾವಣೆಯ ಕಣಕ್ಕಿಳಿಯಲಿದ್ದೇನೆ ಎಂದು ಕಾಂಗ್ರೆಸ್ ತೊರೆದಿದ್ದ ಮುಖಂಡ ಕೆ.ಎಂ. ಕೆಂಪರಾಜು ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ತಮಗೆ ಟಿಕೆಟ್ ತಪ್ಪಿದ ನಂತರ ಕಡೂರು ಪಟ್ಟಣದಲ್ಲಿ ಎರಡು ಭಾರಿ ನನ್ನ ವಿಧಾನಸಭಾ ಕ್ಷೇತ್ರದ ಮತದಾರರು ಹಾಗೂ ಬೆಂಬಲಿಗರ ಸಭೆ ನಡೆಸಿದೆ.
ಸಭೆಯಲ್ಲಿ ಪಕ್ಷೇತರರಾಗಿ ಅಥವಾ ಬೇರೊಂದು ಪಕ್ಷದ ಅಭ್ಯರ್ಥಿಯಾಗಿ ಸ್ಫರ್ಧಿಸುವಂತೆ ನನ್ನ ಕಾರ್ಯಕರ್ತರು ಅಭಿಪ್ರಾಯ ನೀಡಿದ ಹಿನ್ನೆಲೆಯಲ್ಲಿ ಬಿಎಸ್‌ಆರ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಯಲು ತೀರ್ಮಾನಿಸಿದ್ದೇನೆ.
ಬಿಎಸ್‌ಆರ್ ಪಕ್ಷದ ನಮ್ಮ ಮುಖಂಡರು ತಮಗೆ ಬಿಎಸ್‌ಆರ್ ನಾಯಕ ಶ್ರೀರಾಮುಲು ಅವರನ್ನು ಭೇಟಿ ಮಾಡಿಸಿದ ನಂತರ ನಡೆದ ಮಾತುಕತೆಯಂತೆ ತಮಗೆ ಕಡೂರು ಕ್ಷೇತ್ರದ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡುವ ಕುರಿತು ಕೈಗೊಂಡ ತೀಮಾರ್ನದ ನಂತರ ನನ್ನನ್ನು ಪಕ್ಷದ ಅಭ್ಯರ್ಥಿಯೆಂದು ಘೋಷಿಸಲಾಗಿದೆ ಎಂದರು.
ಸೇವೆ ಪರಿಗಣಿಸಿಲ್ಲ: ಕಳೆದ ಪುರಸಭಾ ಚುನಾವಣೆಯಲ್ಲಿ ಕಡೂರು ಪಟ್ಟಣದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಸದಸ್ಯರು ಗೆಲುವು ಸಾಧಿಸುವಂತೆ ಮಾಡಿದ ನನ್ನ ಸೇವೆಯನ್ನು ಪರಿಗಣಿಸಲಿಲ್ಲ.
ಈ ಹಿನ್ನೆಲೆಯಲ್ಲಿ ಬೇಸರಗೊಂಡು ತಾವು ಕಾಂಗ್ರೆಸ್ ತೊರೆದು ಬಿಎಸ್‌ಆರ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದರು.
ಈಗಾಗಲೇ ನಾನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೂ, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸಿ ಪತ್ರವನ್ನು ಬ್ಲಾಕ್ ಘಟಕದ ಅಧ್ಯಕ್ಷರಿಗೆ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸುತ್ತೇನೆ.
ಹಲವು ದಶಕದಿಂದ ನಾನು ಹಾಗೂ ಸಹೋದರ ಕೆ.ಎಂ. ಕೃಷ್ಣಮೂರ್ತಿ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯ ಮತ್ತು ಸಾಧನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹಿರೇನಲ್ಲೂರು ಗ್ರಾಪಂ ಸದಸ್ಯ ಕಲ್ಲೇಶ್, ಸಿಂಗಟಗೆರೆ ರಮೇಶ್ ಬಸವರಾಜು, ಚಿಕ್ಕಂಗಳ ಲೋಕೇಶ್, ತಿಮ್ಮಯ್ಯ, ರಾಜು, ಅಶ್ರಫ್ ಮತ್ತಿತರರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.