ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೊಸಳೆ ಕಣ್ಣೀರು ಹಾಕುವ ಸಿ.ಟಿ. ರವಿ

Lingaraj Badiger
Updated On : 13 Apr 2013, 10:46 am

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಏ.12
ಅಲ್ಪಸಂಖ್ಯಾತರ ಮತ ಬಿಟ್ಟು ರಾಜಕೀಯ ಮಾಡುವುದಾಗಿ ಹೇಳಿದ್ದ ಸಿ.ಟಿ. ರವಿಯವರು ಈಗ ಮೊಸಳೆ ಕಣ್ಣೀರು ಹಾಕುತ್ತಾ ಮುಸ್ಲಿಮರು ಈ ದೇಶದ ಒಂದು ಭಾಗ ಎಂದು ನಾಟಕ ಮಾಡುತ್ತಿರುವುದರ ಹಿಂದಿನ ಸತ್ಯವನ್ನು ಮತದಾರರಿಗೆ ಬಿಚ್ಚಿಡುತ್ತೇವೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಲ್. ಭೋಜೇಗೌಡ ಹೇಳಿದ್ದಾರೆ.
ನಗರದ ವಿವಿಧೆಡೆ ಶುಕ್ರವಾರದಂದು ಚುನಾವಣಾ ಪ್ರಚಾರದಲ್ಲಿ ತೊಡಗಿದ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಸಚಿವ ಸಿ.ಟಿ. ರವಿಯವರು ಬಹಿರಂಗ ಸಭೆಗಳಲ್ಲಿ ಭಾಷಣ ಮಾಡಿ, ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಓಲೈಸಲು ಅಲ್ಪಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಮರೆತಿದ್ದಾರೆ ಎಂದು ಕಾಣಿಸುತ್ತದೆ. ಆದರೆ, ಅದರ ಪ್ರತಿಗಳು ನಮ್ಮ ಬಳಿ ಭದ್ರವಾಗಿವೆ, ಅದನ್ನು ಪ್ರಿಂಟ್ ಮಾಡಿ ಕ್ಷೇತ್ರದಲ್ಲಿ ಹಂಚುವ ಮೂಲಕ ನಿಮ್ಮ ಮೊಸಳೆ ಕಣ್ಣೀರಿನ ಬಣ್ಣ ಬಯಲು ಮಾಡುತ್ತೇವೆ ಎಂದರು.
ರಾಜಕೀಯ ಪ್ರದರ್ಶನಕ್ಕೆ ತಿಲಾಂಜಲಿ: ಸಂಕಟ ಬಂದಾಗ ವೆಂಕಟರಮಣ ಎಂಬ ಗಾದೆ ಮಾತಿಗನುಗುಣವಾಗಿ ಕಾಲಕ್ಕೆ ತಕ್ಕಂತೆ ಯಾರ ಕಾಲು ಬೇಕಾದರೂ ಹಿಡಿಯಲು ಸಿದ್ಧರಿರುವ ನಿಮ್ಮ ರಾಜಕೀಯ ಪ್ರದರ್ಶನಕ್ಕೆ ತಿಲಾಂಜಲಿ ಹಾಡುವ ಕಾಲ ದೂರವಿಲ್ಲ ಎಂದು ಹೇಳಿದರು.
ಮಸೀದಿ, ಚರ್ಚ್‌ಗಳ ಮೇಲಿನ ದಾಳಿ ಪ್ರಕರಣಗಳು ಇನ್ನೂ ಮಾಸಿಲ್ಲ, ಮುಸ್ಲಿಮರ ವಿರುದ್ಧದ ನಿಮ್ಮ ಕಠೋರ ಶಬ್ದಗಳು ಗುಯ್ ಗುಟ್ಟುತ್ತಿರುವಾಗಲೇ ಯಾವ ಮುಖ ಹೊತ್ತು ಮತಯಾಚನೆ ಮಾಡುತ್ತೀರಿ ಎಂದು ಪ್ರಶ್ನಿಸಿದ ಅವರು, ನೈತಿಕತೆ ಇಲ್ಲದ ರಾಜಕಾರಣ ಮಾಡುವುದಕ್ಕಿಂತ ಜನರಿಗೆ ತಲೆಬಾಗುವುದೆ ಮೇಲು ಎಂದರು.
   ನಗರಸಭೆ ಸದಸ್ಯ ದಿನೇಶ್, ಮಾಜಿ ಸದಸ್ಯ ಎ.ಆರ್. ಶರೀಫ್, ಮುಖಂಡರಾದ ಹೊಲದಗದ್ದೆ ಗಿರೀಶ್, ಖಜಾಮುಹಿದ್ದಿನ್, ಮುಷರಫ್, ನಿಸಾರ್ ಬೇಗ್, ಆಜೀಜ್ ಅಹಮದ್, ಮುಷರಫ್ ಹಾಜರಿದ್ದರು.
ಬಿಜೆಪಿ ಆಡಳಿತಾವಧಿಯಲ್ಲಿ ಜನ ಸಾಮಾನ್ಯರ ಕಣ್ಣೀರು ಒರೆಸುವ ಬಗ್ಗೆ ಸಚಿವ ಸಿ.ಟಿ. ರವಿ ಕಿಂಚಿತ್ತು ಕಾಳಜಿ ತೋರಿಸಿಲ್ಲ ಎಂದು ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಆರೋಪಿಸಿದ್ದಾರೆ.
  ನಿಡಘಟ್ಟ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೀರೂರು ಕ್ಷೇತ್ರವಿದ್ದಂತ ಸಂದರ್ಭದಲ್ಲಿ ನಾನು ಶಾಸಕನಾಗಿದ್ದಾಗ 6 ಮುರಾರ್ಜಿ ಶಾಲೆ ಮತ್ತು 9 ವಸತಿ ಶಾಲೆಗಳನ್ನು ತರುವ ಮೂಲಕ ಬಡ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ.
    ಕಳಸಾಪುರ, ಬೆಳವಾಡಿ ಸೇರಿದಂತೆ ಸುತ್ತಮುತ್ತ ಜನರ ಬಾಯಾರಿಕೆ ಇಂಗಿಸುವ ಸಲುವಾಗಿ ಮುಗುಳುವಳ್ಳಿ ಪಿಕಪ್ ಎಂದು ನಾಮಕರಣ ಮಾಡಿ ವಿದರ್ಭ ಯೋಜನೆಯಲ್ಲಿ ನಾನು ಅನುದಾನ ಮಂಜುರಾತಿ ಮಾಡಿಸಿದ್ದು ಸುಳ್ಳದಾರೆ ಜನರಿಗೆ ತಲೆಬಾಗುತ್ತೇನೆಂದರು.
ಲಂಚದ ಹಾವಳಿ: ಸತ್ಯ ಹೇಳಿ ಸೋಲುತ್ತೇನೆ ಹೊರತು, ಸುಳ್ಳು ಹೇಳಿ ಗೆಲ್ಲುವ ಜಾಯಮಾನ ನನ್ನದಲ್ಲ. ಬಿಪಿಎಲ್ ಕಾರ್ಡ್‌ನಿಂದ ಹಿಡಿದು ನಮ್ಮ ಆಸ್ತಿ ನಮ್ಮ ಹೆಸರಿಗೆ ವರ್ಗಾಯಿಸಿ ಕೊಳ್ಳುವವರೆಗೂ ಲಂಚದ ಹಾವಳಿ ಮೂಲಕ ಭ್ರಷ್ಟಾಚಾರವೆಸಗಿರುವ ಬಿಜೆಪಿ ಆಡಳಿತ ಕುಸಿದಿದ್ದು ಇದನ್ನು ಮತದಾರರಿಗೆ ಮನ ಮುಟ್ಟುವಂತೆ ತಿಳಿಸುವುದು ನಮ್ಮ ಕಾರ್ಯಕರ್ತರ ಕರ್ತವ್ಯವೆಂದರು.
   ಎಚ್‌ಡಿಕೆ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಹೊಲದಗದ್ದೆ ಗಿರೀಶ್ ಮಾತನಾಡಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಚಂದ್ರಯ್ಯ, ಮುಖಂಡರಾದ ಸೋಮೇಶ್, ಪುಟ್ಟರಾಜು, ಯೋಗೀಶ್  ಉಪಸ್ಥಿತರಿದ್ದರು.
15ಕ್ಕೆ ನಾಮಪತ್ರ ಸಲ್ಲಿಕೆ: ಜಾತ್ಯತೀತ ಜನತಾದಳದ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಅವರು ಏ. 15 ರಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.
   ಅಂದು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಮನವಿ ಮಾಡಿದ್ದಾರೆ.
ಅಂದು ಬೆಳಿಗ್ಗೆ 10.30ಕ್ಕೆ ಸಹಸ್ರಾರು ಜನರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಧರ್ಮೇಗೌಡರ ಗೆಲುವಿಗಾಗಿ ಪ್ರಾರ್ಥಿಸಲಾಗುವುದು.
   ನಂತರ ಎಂ.ಜಿ. ರಸ್ತೆ ಮೂಲಕ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಎಲ್ಲಾ ಜೆ.ಡಿ.ಎಸ್. ಕಾರ್ಯಕರ್ತರು, ಪಕ್ಷದ ಮುಖಂಡರು, ಹಿತೈಷಿಗಳು ಭಾಗವಹಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement