ಸಂಗೀತದಿಂದ ಉತ್ತಮ ಸಂಸ್ಕಾರ
ಕ.ಪ್ರ ವಾರ್ತೆ, ತರೀಕೆರೆ, ಏ.12
ಸಂಗೀತ ಒಂದು ವರದಾನವಿದ್ದಂತೆ ಎಂದು ಚಿಕ್ಕಮಗಳೂರಿನ ಖ್ಯಾತ ಗಮಕಿ, ಆಕಾಶವಾಣಿ ಕಲಾವಿದೆ ಶಶಿಕಲಾ ಶಿವಶಂಕರ್ ಹೇಳಿದ್ದಾರೆ.
ಅವರು ಶುಕ್ರವಾರ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರ ಸುರಭಿ ಟ್ರಸ್ಟ್ ಬೆಂಗಳೂರು, ಪ್ರಕೃತಿಶ್ರೀ ಕಲಾ ಕುಟೀರ ತರೀಕೆರೆಯಿಂದ ಮೃತ್ಯುಂಜಯ ದೊಡ್ಡವಾಡ್ ಸಂಗೀತ ನಿರ್ದೇಶನದಲ್ಲಿ ಪಟ್ಟಣದ ರೋಟರಿ ಶಾಲೆ ಸಭಾಂಗಣದಲ್ಲಿ ಏರ್ಪಾಡಾಗಿದ್ದ 'ಬನ್ನಿ ನಮ್ಮ ಹಾಡಿಗೆ' ಆನಂದಕಂದ ವಿರಚಿತ ಭಾವಗೀತೆಗಳ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಂಗೀತ ಒಳ್ಳೆಯ ಸಂಸ್ಕಾರ ಕಲಿಸುತ್ತದೆ. ಕಲಿಯಬೇಕು ಎನ್ನುವ ವಿಶ್ವಾಸ ಹುಟ್ಟಿಸುತ್ತದೆ. ಭಾವಗೀತೆಗಳ ಕಲಿಕಾ ಶಿಬಿರ ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ ಎಂದರು.
ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾಪ್ರಕಾಶ್ ಮಾತನಾಡಿ, ಬೆಟಗೇರಿ ಕೃಷ್ಣಶರ್ಮರ ಜನ್ಮದಿನ ಒಂದು ಅವಿಸ್ಮರಣೀಯ ಸಂದರ್ಭ. ಭಾವಗೀತೆಗಳ ಕಲಿಕಾ ಶಿಬಿರ ಸಾಂಸ್ಕೃತಿಕ ಏಕೀಕರಣವನ್ನು ನೆನಪಿಸುತ್ತಿದೆ. ಹೆಚ್ಚು ಮಕ್ಕಳು ಶಿಬಿರದ ಉಪಯೋಗ ಪಡೆಯಬೇಕು ಎಂದರು.
ಸಂಗೀತ ಬೆಳೆಯಲಿ: ಬೆಂಗಳೂರು ಸ್ವರ ಸುರಭಿ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಆಯ್ಯರ್ ಮಾತನಾಡಿ, ಬೆಟಗೇರಿ ಕೃಷ್ಣಶರ್ಮರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಬೆಟಗೇರಿಯವರು ಕುವೆಂಪು, ಬೇಂದ್ರೆಯವರ ಸಮಕಾಲಿನರಾಗಿದ್ದರು. ಬೆಟಗೇರಿಯರ ಗೀತೆಗಳನ್ನು ಜನಪ್ರಿಯಗೊಳಿಸುವ ಜವಾಬ್ದಾರಿಯನ್ನು ಟ್ರಸ್ಟ್ ಹೊಂದಿದೆ. ಸುಗಮ ಸಂಗೀತ ಹೆಚ್ಚು ಬೆಳೆಯಬೇಕು ಎಂದು ತಿಳಿಸಿದರು.
ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ್ ಮಾತನಾಡಿ, ಕವಿಗೀತೆಗಳು ಇಡೀ ವಿಶ್ವವನ್ನೇ ಬೆಳಗಿಸುತ್ತದೆ. ಸಾಹಿತ್ಯದ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಎಲ್ಲರಿಗೂ ತಲುಪಿಬೇಕು. ಕವಿಗೀತೆಗಳನ್ನು ಪ್ರಸರಿಸುವುದು ಸತ್ಕಾರ್ಯ ಎಂದು ತಿಳಿಸಿದರು.
ರೋಟರಿ ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಸಿ. ಶರತ್, ಶಿಬಿರದ ಸಂಯೋಜಕರಾದ ಬೆಳಗಾವಿ ಆಶಾ ಕಡಕಟ್ಟಿ, ಹಾವೇರಿಯ ಸತೀಶ್ ಕುಲಕರ್ಣಿ ಮಾತನಾಡಿದರು. ರಶ್ಮಿ ರಮೇಶ್, ಶಿಬಿರಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಉಮಾ ಪ್ರಕಾಶ್ ಸ್ವಾಗತಿಸಿ, ರಶ್ಮಿ ರಮೇಶ್ ಕಾರ್ಯಕ್ರಮ ನಿರೂಪಿಸಿ, ಗೀತಾ ವಂದಿಸಿದರು.