ಕ್ಷೇತ್ರಕ್ಕಿಂತ ಹಿಬಾಲಕರ ಅಭಿವೃದ್ಧಿಗೆ ಗಮನ
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಏ. 13
ಸಿ.ಟಿ. ರವಿ ಅವರು ಶಾಸಕರಾದ ನಂತರ ಕ್ಷೇತ್ರದ ಅಭಿವೃದ್ಧಿ ಬದಲಿಗೆ ಅವರು ಮತ್ತು ಅವರ ಹಿಂಬಾಲಕರ ಅಭಿವೃದ್ಧಿ ಯಥೇಚ್ಚವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಟೀಕಿಸಿದ್ದಾರೆ.
ನಗರದ ರಾಮೇಶ್ವರ ಬಡಾವಣೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶ್ರೀ ಬೋಳರಾಮೇಶ್ವರ ಯುವಕ ಸಂಘದ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಯುವಕರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಅನ್ಯಾಯ, ಅಕ್ರಮ ಮತ್ತು ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿದರು.
ಜನಸ್ನೇಹಿ ಆಡಳಿತ: ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಜನಪರ ಮತ್ತು ಪ್ರಾಮಾಣಿಕ ಅಭ್ಯರ್ಥಿಯನ್ನು ನಿಲ್ಲಿಸಿದ್ದು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಜನಸ್ನೇಹಿ ಆಡಳಿತವನ್ನು ನೀಡುತ್ತಾರೆ ಎಂದು ಭರವಸೆ ನೀಡಿದರು.
ಪಕ್ಷಕ್ಕೆ ಸೇಪಂಡೆಗೊಂಡ ಶ್ರೀ ಬೋಳರಾಮೇಶ್ವರ ಯುವಕ ಸಂಘದ ಅಧ್ಯಕ್ಷ ಸಿ.ಆರ್. ಬಾಲರಾಜ್ ಗೌಡ ಮಾತನಾಡಿ, ಬಿಜೆಪಿಯ ಅಕ್ರಮ, ಅನ್ಯಾಯ ಮತ್ತು ಭ್ರಷ್ಟಾಚಾರದಿಂದ ಬೇಸತ್ತು ತಾವು ಮತ್ತು ತಮ್ಮ ಸ್ನೇಹಿತರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದಾಗಿ ಹೇಳಿದರು.
ತಮಗೆ ಪಕ್ಷದಲ್ಲಿ ಯಾವುದೇ ಪದವಿ ನೀಡುವುದು ಬೇಡ. ಅದರ ಬದಲಿಗೆ ತಮ್ಮನ್ನು ತಮ್ಮ ಸ್ನೇಹಿತರನ್ನು ಗೌರವಯುತವಾಗಿ ನಡೆಸಿಕೊಂಡರೆ ಸಾಕು ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಶಾಂತೇಗೌಡ, ನಗರಸಭೆ ಸದಸ್ಯ ಹೆಚ್.ಎಸ್. ಪುಟ್ಟಸ್ವಾಮಿ, ಶ್ರೀ ಬೋಳರಾಮೇಶ್ವರ ಯುವಕ ಸಂಘದ ಉಪಾಧ್ಯಕ್ಷ ನಿಶಾಂಕ್ ಗೌಡ, ಉಮೇಶ್ಉಪಸ್ಥಿತರಿದ್ದರು.
ವಿವಿಧೆಡೆ ಪ್ರಚಾರ: ನಗರದ ದೋಣಿಖಣ, ಶಂಕರಪುರ, ತೇಗೂರು ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಶಾಂತೇಗೌಡ ಅವರು ಶನಿವಾರ ಮತಯಾಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇತರೆ ಪಕ್ಷಗಳಿಂದ ಯುವಕರು ಮತ್ತು ಮಹಿಳೆಯರು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ಪಕ್ಷಗಳ ಆಡಳಿತ ಕಂಡು ಜನ ಬೇಸತ್ತಿದ್ದಾರೆ. ಈ ಬಾರಿ ರಾಜ್ಯದಾದ್ಯಂತ ಕಾಂಗ್ರೆಸ್ ಪರ ಅಲೆ ಇದ್ದು, ಪಕ್ಷಾತೀತವಾಗಿ ಕೆಲಸ ಮಾಡುವುದರ ಜೊತೆಗೆ ಸರ್ವರಿಗೂ ಸಮಪಾಲು, ಸಮಬಾಳು ರೀತಿಯಲ್ಲಿ ಉತ್ತಮ ಆಡಳಿತ ನೀಡುತ್ತೇವೆ ಎಂದು ತಿಳಿಸಿದರು. ನಗರಸಭಾ ಸದಸ್ಯ ಪುಟ್ಟಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಈ ಬಾರಿ ಅತ್ಯಂತ ಪ್ರಾಮಾಣಿಕರಾದ ಶಾಂತೇಗೌಡರಿಗೆ ಟಿಕೆಟ್ ನೀಡಿ ಹಿಂದುಳಿದ ವರ್ಗದವರಿಗೂ ಅವಕಾಶ ಮಾಡಿಕೊಟ್ಟಿದೆ. ಈ ಅವಕಾಶವನ್ನು ಮತದಾರರು ಬಳಸಿಕೊಂಡು ಕಾಂಗ್ರೆಸನ್ನು ಬೆಂಬಲಿಸಬೇಕು ಎಂದರು. ಸಂದೇಶ್, ರಿಜ್ವಾನ್, ಬಾಲು, ದಿನೇಶ್ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.