ಗ್ರಾಮೀಣ ಕ್ರೀಡೆ ಉಳಿಸುವುದು ಅಗತ್ಯ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ. 13
ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಜನಮಾನಸದಿಂದ ಮರೆಯಾಗುತ್ತಿರುವ ದೇಶೀಯ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಯುವಜನತೆ ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಕರೆ ನೀಡಿದ್ದಾರೆ.
ತಾಲೂಕಿನ ತೇಗೂರಿನಲ್ಲಿ ಸ್ಥಳೀಯ ಅಗ್ನಿ ವಾರಿಯರ್ಸ್ ಕ್ರಿಕೆಟ್ ತಂಡ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಯುವ ಜನತೆಯಲ್ಲಿರುವ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹ ಮತ್ತು ಆಧುನೀಕತೆಯ ಭರದಿಂದಾಗಿ ದೇಶದಲ್ಲಿಂದು ಗ್ರಾಮೀಣ ಸಾಂಪ್ರದಾಯಿಕ ಕ್ರೀಡೆಗಳು ಮೂಲೆ ಗುಂಪಾಗಿವೆ.
ಮಾನಸಿಕ ಮತ್ತು ದೈಹಿಕವಾಗಿ ಬಲಾಢ್ಯಗೊಳಿಸುವುದರ ಜೊತೆಗೆ ಸಾಮರಸ್ಯತೆ ಮತ್ತು ಸೌಹಾರ್ಧತೆ ಬೆಳೆಸುತ್ತಿದ್ದ ಗ್ರಾಮೀಣ ಕ್ರೀಡೆಗಳು ಜನಮಾನಸದಿಂದ ಮರೆಯಾಗಿವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಪಾಶ್ಚಾತ್ಯರು ನಮ್ಮ ಸಾಂಪ್ರದಾಯಿಕ ಕ್ರೀಡೆಗಳಿಗೆ ಆಕರ್ಷಿತರಾಗಿ ಭಾರತದತ್ತ ಮುಖ ಮಾಡುತ್ತಿರುವಾಗ ನಮ್ಮ ಜನ ತಮ್ಮ ಸಂಸ್ಕೃತಿ ಮತ್ತು ದೇಶೀಯ ಆಟಗಳಿಗೆ ಎಳ್ಳುನೀರು ಬಿಡುತ್ತಿರುವುದು ಸರಿಯಲ್ಲ ಎಂದರು.
ಈಗಲಾದರೂ ನಮ್ಮ ಯುವ ಜನತೆ ಎಚ್ಚೆತ್ತು ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.
ತೇಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿನಿವಾಸ್ ರಾಜು, ಗ್ರಾಮದ ಮುಖಂಡ ಕಾಂತರಾಜ್, ಸಂಜಯ್, ಕಾರ್ತಿಕ್ ಉಪಸ್ಥಿತರಿದ್ದರು.