ಲೋಕಸತ್ತಾ ಪಕ್ಷದ ಅಭ್ಯರ್ಥಿಯಾಗಿ ಟಿ.ಆರ್. ಕೃಷ್ಣಪ್ಪ
ಸಾಗರ: ಸಾಗರ ವಿಧಾನಸಭಾ ಕ್ಷೇತ್ರದಿಂದ ಲೋಕಸತ್ತಾ ಪಕ್ಷದ ಅಭ್ಯರ್ಥಿಯಾಗಿ ಸಾಮಾಜಿಕ ಹೋರಾಟಗಾರ ರಿಪ್ಪನ್‌ಪೇಟೆಯ ಟಿ.ಆರ್. ಕೃಷ್ಣಪ್ಪ ವಿಶಿಷ್ಟಶೈಲಿಯಲ್ಲಿ ಶನಿವಾರ ಉಪವಿಭಾಗಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ಕೃಷ್ಣಪ್ಪ ಅವರು ಸಲ್ಲಿಸಿರುವ ನಾಮಪತ್ರದ ಜಾತಿ ಕಲಂನಲ್ಲಿ ಮಾನವ ಜಾತಿ ಎಂದು ನಮೂದಿಸಿದ್ದಾರೆ. ಜೊತೆಗೆ ಠೇವಣಿ ಹಣ 10 ಸಾವಿರ ರು.ಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಕಟ್ಟಿದ್ದಾರೆ.
ಮಾನವಜಾತಿ: 1967ರಲ್ಲಿ ಭಾರತೀಯ ಜನಸಂಘದ ಕಾರ್ಯಕರ್ತರಾಗಿ, 1977ರಲ್ಲಿ ಜನತಾಪಕ್ಷ, 1980ರಲ್ಲಿ ಬಿಜೆಪಿ, 1983ರಲ್ಲಿ ಎಸ್.ಬಂಗಾರಪ್ಪ ಅವರ ಕ್ರಾಂತಿರಂಗದಲ್ಲಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಕೃಷ್ಣಪ್ಪನವರು ನಂತರದ ವರ್ಷಗಳಲ್ಲಿ ರಾಜಕೀಯ ಕ್ಷೇತ್ರದಿಂದ ದೂರವಿದ್ದು, ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.
ಭ್ರಷ್ಟಾಚಾರ ನಿರ್ಮೂಲನೆ: ನಾಮಪತ್ರದಲ್ಲಿ ಜಾತಿ ಕಲಂನಲ್ಲಿ ಮಾನವಜಾತಿ ಎಂದು ನಮೂದಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಾಗರ ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದ್ದು, ಇದು ಮೀಸಲು ಕ್ಷೇತ್ರವಲ್ಲ. ಆದ್ದರಿಂದ ಜಾತಿ ಯಾವುದು ಎನ್ನುವುದು ಇಲ್ಲಿ ಮುಖ್ಯವಲ್ಲ. ಮೀಸಲು ಕ್ಷೇತ್ರ ಹೊರತುಪಡಿಸಿ ಇತರೆ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವಾಗ ನಾಮಪತ್ರದಲ್ಲಿ ಜಾತಿ ಕಲಂ ಇರಲೆಬಾರದು ಎಂದಿದ್ದಾರೆ.