ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಹಣ, ಹೆಂಡ ಅಮಿಷ ಒಡ್ಡುತ್ತಿರುವ ಬಿಜೆಪಿ'

Vishwanath S
Updated On : 14 Apr 2013, 1:11 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.13
ಬಿಜೆಪಿ ಪಕ್ಷವು ಚುನಾವಣಾ ಸಂದರ್ಭದಲ್ಲಿ ಯುವಕರಿಗೆ ಹಣ, ಹೆಂಡದ ಅಮಿಷಗಳನ್ನು ಒಡ್ಡಿ ದಾರಿ ತಪ್ಪಿಸುತ್ತಿದೆ. ಹಣ, ಹೆಂಡದಿಂದ ಚುನಾವಣೆ ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ಮುಖಂಡ ಎಸ್.ಎಲ್. ಬೋಜೇಗೌಡ ಹೇಳಿದ್ದಾರೆ.
ನಗರದ ಜೆಡಿಎಸ್ ಚುನಾವಣಾ ಪ್ರಚಾರ ಕಚೇರಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕೆಜೆಪಿ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರುಗಳನ್ನು ಜೆಡಿಎಸ್‌ಗೆ ಸೇರ್ಪಡೆಗೊಳಿಸಿ ಮಾತನಾಡಿದ ಅವರು, ದತ್ತಪೀಠದ ಹೆಸರಿನಲ್ಲಿ ಒಮ್ಮೆ ಯುವಕರನ್ನು ದಾರಿ ತಪ್ಪಿಸಿ ಅಧಿಕಾರ ಬಂದ ನಂತರ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದರು. ಇಂದು ಚುನಾವಣೆ ಸಂದರ್ಭದಲ್ಲಿ ಅದೇ ಕೆಲಸ ಮಾಡಲು ಹೊರಟಿದ್ದಾರೆ. ಯುವಕರು ಹಣದ ಆಸೆಗೆ ತಮ್ಮ ಮತವನ್ನು ಮಾರಿಕೊಳ್ಳದೆ ಜವಾಬ್ದಾರಿಯುತವಾಗಿ ಉತ್ತಮ ಅಭ್ಯರ್ಥಿಗೆ ಮತ ನೀಡಿ ಜೆಡಿಎಸ್ ಅನ್ನು ಬೆಂಬಲಿಸಬೇಕೆಂದು ತಿಳಿಸಿದರು.
ಒಳಒಪ್ಪಂದ: ಉನ್ನತ ಶಿಕ್ಷಣ ಸಚಿವರಾಗಿ ಜಿಲ್ಲೆಯ ಯಾವುದೇ ಯುವಕ ಯುವತಿಯರಿಗೆ ಕೆಲಸ ನೀಡದೆ ನಾಟಕೀಯ ಕೆಲಸ ಮಾಡುತ್ತಿದ್ದಾರೆ. ಆಟವಾಡುವ ಹುಡುಗನ ಕೈಲಿ ಅಧಿಕಾರ ನೀಡಿರುವುದರಿಂದ ಅಭಿವೃದ್ಧಿ ಹೆಸರಿನಲ್ಲಿ ಹಣ ದೋಚಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಾಂತೇಗೌಡರ ಹೆಸರಿನಲ್ಲಿ ಕಾಮಗಾರಿಗಳನ್ನು ಮಾಡಿ ಬಿಲ್ಲುಗಳನ್ನು ಇವರು ಪಡೆಯುತ್ತಿದ್ದು, ಇಬ್ಬರಲ್ಲೂ ಒಳಒಪ್ಪಂದ ಏರ್ಪಟ್ಟಿದೆ. ಈ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.
  ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಸಿ.ಎನ್. ಅಕ್ಮಲ್ ಮಾತನಾಡಿ, ನಗರದಲ್ಲಿ ಕಾಂಗ್ರೆಸ್, ಬಿಜೆಪಿ ಹೊಂದಾಣಿಕೆಯ ರಾಜಕೀಯ ಮಾಡುತ್ತಿವೆ. 800 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಎಷ್ಟು, ದೋಚಿದ್ದು ಎಷ್ಟು ಎಂದು ಜನರಿಗೆ ತಿಳಿಸಬೇಕು. ಹಿಂದೆ ಅಲ್ಪಸಂಖ್ಯಾತರ ಮತಗಳನ್ನು ತಿರಸ್ಕರಿಸಿದ್ದ ಬಿಜೆಪಿ ಇಂದು ಮತಕ್ಕಾಗಿ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.
 ರಾಜ್ಯ ಸಂಘಟನಾ ಕಾರ್ಯದರ್ಶಿ ರಂಜನ್ ಅಜಿತ್ ಕುಮಾರ್ ಮಾತನಾಡಿ, ಜೆ.ಡಿ.ಎಸ್. ಸರ್ಕಾರ ಬಂದ 48 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ ಎಂದರು. ಜಿಲ್ಲಾ ಯುವ ಘಟಕ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಸತೀಶ್, ರಘು, ಲಕ್ಷ್ಮಣ್, ಶಫಿವುಲ್ಲ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement