ಅಂಬೇಡ್ಕರ್ ಮಾರ್ಗ ಅನುಸರಿಸಿ
ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಗುಣಗಾನ ಮಾಡುವುದಕ್ಕಿಂತ ಅವರು ಹಾಕಿಕೊಟ್ಟ ಮಾರ್ಗ ಅನುಸರಿಸುವುದು ಮುಖ್ಯ ಎಂದು ತಾಪಂ ಉಪಾಧ್ಯಕ್ಷ ಎಚ್.ಎಸ್. ಪುಟ್ಟೇಗೌಡ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪರಿಸ್ಥಿತಿಗೂ ಮತ್ತು ಜಾಯಮಾನಕ್ಕೂ ಹೊಂದಿಕೊಳ್ಳುವಂತಹ ವಿಶಿಷ್ಟವಾದ ಸಂವಿಧಾನವನ್ನು ರಚಿಸಿದ ಮಹಾನ್ ಚೇತನ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಬಣ್ಣಿಸಿದರು.
ಸೀತಾರಾಂ ಭರಣ್ಯ ಮಾತನಾಡಿ, ರಾಜ್ಯದಲ್ಲಿ ದಲಿತ ಕಾಲೋನಿಗಳ ಅಭಿವೃದ್ಧಿಗೆ ಹೆಗಲು ಕೊಟ್ಟು ಸ್ಪಂದಿಸಿ ನೈಜವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸುವ ಯೋಗ್ಯತೆ ಬಿಜೆಪಿಗೆ ಮಾತ್ರ ಇದೆ ಎಂದರು.
ತಾಪಂ ಅಧ್ಯಕ್ಷ ಬಸವರಾಜ್, ಎಪಿಎಂಸಿ ಅಧ್ಯಕ್ಷ ಬೆಳವಾಡಿ ರವೀಂದ್ರ, ಎಸ್.ಸಿ. ಮೋರ್ಚಾ ತಾಲೂಕು ಅಧ್ಯಕ್ಷ ಕೆ.ಪಿ. ವೆಂಕಟೇಶ್, ಸಿ.ಡಿ.ಎ ಮಾಜಿ ಅಧ್ಯಕ್ಷ ಶ್ರೀಕಾಂತ್ ಪೈ, ನಗರಸಭೆ ಸದಸ್ಯರಾದ ದೇವರಾಜಶೆಟ್ಟಿ, ಪುಷ್ಪರಾಜ್, ಕೋಟೆ ಕೃಷ್ಣ, ಹೆಚ್.ಡಿ. ತಮ್ಮಯ್ಯ, ನಗರಾಧ್ಯಕ್ಷ ಸಿ.ಎಸ್. ರಂಗನಾಥ್, ಮುಖಂಡರಾದ ಹಿರೇಮಗಳೂರು ಜಗದೀಶ್, ವರಸಿದ್ದಿ ವೇಣುಗೋಪಾಲ್ ಹಾಜರಿದ್ದರು.