ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಡೂರು ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಆರಂಭ

Lingaraj Badiger
Updated On : 15 Apr 2013, 11:01 am

-ಕಡೂರು ಕೃಷ್ಣಮೂರ್ತಿ
ಕ.ಪ್ರ.ವಾರ್ತೆ, ಕಡೂರು,  ಏ.14

ವಿವಿಧ ಪಕ್ಷಗಳ ಅಭ್ಯರ್ಥಿಗಳ ಘೋಷಣೆಯಾಗುವ ಮೂಲಕ ಕ್ಷೇತ್ರದ ಜನರಲ್ಲಿ ಹುಟ್ಟಿಸಿದ್ದ ಕುತೂಹಲಕ್ಕೆ ತೆರೆಬಿದ್ದು, ಚುನಾವಣೆಯ ರಂಗು ಏರತೊಡಗಿರುವ ಬೆನ್ನಲ್ಲೇ ಪಕ್ಷಾಂತರದ ಬೆಳವಣಿಗೆ ಹೆಚ್ಚಾಗುತ್ತಿದೆ.
ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳಾಗಿದ್ದ ಕೆ.ಬಿ. ಮಲ್ಲಿಕಾರ್ಜುನ್, ಕೆ.ಎಂ. ಕೆಂಪರಾಜು, ಮಹೇಶ್ ಒಡೆಯರ್, ಸಿ. ನಂಜಪ್ಪ, ಕೆ.ಎಂ. ವಿನಾಯಕ್ ನಡುವೆ ಪೈಪೋಟಿ ನಡೆದು ಅಂತಿಮವಾಗಿ ಪಕ್ಷ ಕೆ.ಬಿ. ಮಲ್ಲಿಕಾರ್ಜುನ್‌ರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಕೆಬಿಎಂ ಪ್ರಚಾರದಲ್ಲಿ ತೊಡಗಿದ್ದಾರೆ.
ಜಿದ್ದಾಜಿದ್ದಿ: ಇತ್ತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಂ. ಕೆಂಪರಾಜು ತಮ್ಮ ಬೆಂಬಲಿಗರ ಸಭೆ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಚುನಾವಣೆ ಎದುರಿಸುತ್ತಿದ್ದಾರೆ. ಜೆಡಿಎಸ್‌ನಲ್ಲಿ ವೈ.ಎಸ್.ವಿ. ದತ್ತ ಅಭ್ಯರ್ಥಿಯಾಗಿರುವುದರಿಂದ ಅವರು ಕ್ಷೇತ್ರದಾದ್ಯಂತ ಸುತ್ತಿ ಪ್ರಚಾರ ಮಾಡುತ್ತಿದ್ದಾರೆ.
ಪ್ರಚಾರ: ಬಿಜೆಪಿಯಿಂದ ಟಿಕೆಟ್ ಬಯಸಿದ್ದ ಬೀರೂರು ದೇವರಾಜು, ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಅರೇಕಲ್ ಪ್ರಕಾಶ್, ಕೆ.ಎಚ್.ಎ. ಪ್ರಸನ್ನ ನಡುವೆ ಪೈಪೋಟಿ ನಡೆದು ಅಂತಿಮವಾಗಿ ಪಕ್ಷ ಬೀರೂರು ದೇವರಾಜ್‌ಗೆ ಟಿಕೆಟ್ ನೀಡುವ ಮೂಲಕ ದೇವರಾಜು ಕಚೇರಿ ಆರಂಭಿಸಿ ಪ್ರಚಾರ ಆರಂಭಿಸಿದ್ದಾರೆ. ಇನ್ನು ಕೆಜೆಪಿಯಿಂದ ಬೆಳ್ಳಿ ಪ್ರಕಾಶ್‌ಗೆ ಪಕ್ಷ ಟಿಕೆಟ್ ನೀಡಿದ್ದು ಅವರೂ ಪ್ರಚಾರದಲ್ಲಿ ತೊಡಗಿದ್ದಾರೆ.
ಪಕ್ಷಾಂತರ: ವಿವಿಧ ಪಕ್ಷಗಳ ಟಿಕೆಟ್ ಹಂಚಿಕೆ ಮಗಿದು ಕ್ಷೇತ್ರದಲ್ಲಿ ಇದೀಗ ಹೊಸ ರಾಜಕೀಯ ಬೆಳವಣಿಗೆಗಳು ನಡೆಯುವ ಮೂಲಕ ಪಕ್ಷಾಂತರ ಪ್ರಕ್ರಿಯೆ ಆರಂಭವಾಗಿ ಮುಖಂಡರು ಕಾರ್ಯಕರ್ತರು ಬೇರೆ ಬೇರೆ ಪಕ್ಷಗಳಿಗೆ ಸೇರ್ಪಡೆ ಆಗುತ್ತಿದ್ದಾರೆ.
ಕೆಜೆಪಿಯಿಂದ ತಮಗೆ ಟಿಕೆಟ್ ನೀಡದೆ ಮೋಸ ಮಾಡಿದರು ಎಂದು ಕೆಜೆಪಿ ತಾಲೂಕು ಸಂಚಾಲಕರಾಗಿದ್ದ ಕಾಮನಕೆರೆ ಶಶಿಧರ್ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಸಮ್ಮುಖದಲ್ಲಿ ಮರಳಿ ತಮ್ಮ ಮಾತೃ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮೂರು ಭಾರಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾಗಿ ದುಡಿದರೂ ತಮ್ಮ ಸೇವೆ ಪರಿಗಣಿಸಿ ಗುರ್ತಿಸಲಿಲ್ಲ ಎಂದು  ಎಸ್.ವಿ. ಉಮಾಪತಿ ಬಿಜೆಪಿ ತೊರೆದು ಕೆಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಎಸ್‌ಆರ್‌ನಿಂದ ಹೊರಹೋಗಿರುವ ಪಕ್ಷದ ಜಿಲ್ಲಾ ಮುಖಂಡ ಕೆ.ಎಚ್. ಶಂಕರ್ ಇಂದು ಅಥವಾ ನಾಳೆ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಬಿಎಸ್‌ಆರ್ ಪಕ್ಷದ ಇನ್ನೋರ್ವ ಮುಖಂಡ ಯರದಕೆರೆ ಎಂ. ರಾಜಪ್ಪ ತಮ್ಮ ಬೆಂಬಲಿಗರೊಂದಿಗೆ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ಪ್ರಕಟಿಸಿದ್ದಾರೆ.
2010 ರಲ್ಲಿ ನಡೆದ ಕಡೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಒಂದೊಂದು ಸಮುದಾಯಗಳ ಸಭೆ ನಡೆಯುವ ಮೂಲಕ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡು ಪಕ್ಷ ಸೇರ್ಪಡೆಯಾಗಿದ್ದನ್ನು ಕಾಣಬಹುದಾಗಿದೆ. ಪಕ್ಷಗಳ ಮುಖಂಡರ ತೀರ್ಮಾನಗಳು ಈ ರೀತಿಯಾದರೆ, ಕಡೂರು, ಬೀರೂರು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿಯೂ ಪಕ್ಷಾಂತರ ಬೆಳವಣಿಗೆ ನಡೆಯುತ್ತಿದೆ.
ಗ್ರಾಮಾಂತರ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ತಮ್ಮನಾಯಕರನ್ನು ಹಿಂಬಾಲಿಸುತ್ತಾ ಅವರು ತೆಗೆದುಕೊಳ್ಳುವ ನಿರ್ಣಯಕ್ಕೆ ತಕ್ಕಂತೆ ಪಕ್ಷವನ್ನು ಬದಲಾಯಿಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ದಿನಕ್ಕೊಂದು ರಾಜಕೀಯ ಬೆಳವಣಿಗೆಗಳು ಕ್ಷೇತ್ರದಲ್ಲಿ ನಡೆಯುತ್ತಿದ್ದು, ಚುನಾವಣೆ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ.
ಇದೀಗ ಕಾಂಗ್ರೆಸ್‌ನಿಂದ ಕೆ.ಬಿ. ಮಲ್ಲಿಕಾರ್ಜುನ್, ಜೆಡಿಎಸ್‌ನಿಂದ ವೈ.ಎಸ್.ವಿ. ದತ್ತ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕೆ.ಎಂ.  ಕೆಂಪರಾಜು, ಕೆಜೆಪಿಯಿಂದ ಬೆಳ್ಳಿ ಪ್ರಕಾಶ್ ಮತ್ತು ಬಿಜೆಪಿಯಿಂದ ಬೀರೂರು ದೇವರಾಜು ಸೇರಿದಂತೆ ಐವರು ಅಭ್ಯರ್ಥಿಗಳು ಕಣದಲ್ಲಿ ಉಳಿಯುವ ಮೂಲಕ ಅಭ್ಯರ್ಥಿಗಳ ಆಯ್ಕೆಯ ಗೊಂದಲಕ್ಕೆ ತೆರೆ ಬಿದ್ದಿದ್ದು ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement