ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಜಕಾರಣದ ಭವಿಷ್ಯ ಹೇಳುವ ಶೃಂಗೇರಿ ಕ್ಷೇತ್ರ

Lingaraj Badiger
Updated On : 15 Apr 2013, 10:57 am

ಕ.ಪ್ರ.ವಾರ್ತೆ,ಚಿಕ್ಕಮಗಳೂರು,  ಏ.14
ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಯಾವ ಪಕ್ಷ ಜಯಗಳಿಸುತ್ತದೆಯೋ ಆ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ.
- ಇದು, ಆಶ್ಚರ್ಯ ಎನಿಸಬಹುದು. ಆದರೂ ಸತ್ಯ.
1952 ರಿಂದ 2008ರವರೆಗೆ ಅಂದರೆ 60 ವರ್ಷಗಳಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಅವಲೋಕನ ಮಾಡಿದರೆ ಶೃಂಗೇರಿ ಕ್ಷೇತ್ರದಲ್ಲಿ ಜಯಗಳಿರುವ ರಾಜಕೀಯ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಸಂಪ್ರದಾಯ ಈವರೆಗೆ ಸುಳ್ಳಾಗಿಲ್ಲ. ಇದಕ್ಕೆ ಶೃಂಗೇರಿ ಶ್ರೀ ಶಾರದಾಂಬೆಯ ಆಶೀರ್ವಾದವೂ ಕಾರಣ ಇರಬಹುದು.
1952ರಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಡಿದಾಳ್ ಮಂಜಪ್ಪ ಅವರು ಜಯಗಳಿಸಿದ್ದರು. ಆಗ ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾದರು. ಅದೇ ಅವಧಿಯಲ್ಲಿ ಕಡಿದಾಳ್ ಮಂಜಪ್ಪ ಮೂರು ತಿಂಗಳ ಕಾಲ ಸಿಎಂ ಆಗಿದ್ದರು. 1957ರಲ್ಲಿ ಕಡಿದಾಳ್ ಮಂಜಪ್ಪ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಅವಿರೋಧ ಆಯ್ಕೆಯಾದರು. ಆಗ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾದರು. 1962 ರಲ್ಲಿ ಕಡಿದಾಳ್ ಮಂಜಪ್ಪ ಮೂರನೇ ಬಾರಿ ಜಯಗಳಿಸಿದರು. ಆಗಲೂ ಸಹ ಎಸ್. ನಿಜಲಿಂಗಪ್ಪ ಸಿಎಂ ಆದರು.
ದೇವರಾಜ್ ಅರಸ್ ಮುಖ್ಯಮಂತ್ರಿ: 1967 ಹಾಗೂ 1972ರಲ್ಲಿ ಕಾಂಗ್ರೆಸ್‌ನ ಕೆ.ಎನ್. ವೀರಪ್ಪಗೌಡ ಜಯಗಳಿದರು. ಆ ಸಂದರ್ಭದಲ್ಲಿ ವೀರೇಂದ್ರ ಪಾಟೀಲ್ ಮತ್ತು ಡಿ. ದೇವರಾಜ್ ಅರಸ್ ಮುಖ್ಯಮಂತ್ರಿಯಾಗಿದ್ದರು. 1978ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಬೇಗಾನೆ ರಾಮಯ್ಯ ಅವರು ಜಯಗಳಿದರು. ಈ ಐದು ವರ್ಷದ ಅವಧಿಯಲ್ಲಿ ಡಿ. ದೇವರಾಜ್ ಅರಸ್ ಮತ್ತು ಆರ್. ಗುಂಡೂರಾವ್ ಸಿಎಂ ಆಗಿದ್ದರು.
1983ರ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಚ್.ಜಿ. ಗೋವಿಂದೇಗೌಡ ಅವರು ಜಯಗಳಿಸಿದರು. ಆಗ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದರು. ಅವಧಿಗೂ ಮುನ್ನ ನಡೆದ ಅಂದರೆ 1985ರಲ್ಲಿ ನಡೆದ ಚುನಾವಣೆಯಲ್ಲಿ ಎಚ್.ಜಿ. ಗೋವಿಂದೇಗೌಡರು ಮತ್ತೆ ಜನತಾಪಕ್ಷದಿಂದ ಸ್ಪರ್ಧೆ ಮಾಡಿ ಜಯಗಳಿಸಿದರು. ಒಂದು ಅವಧಿಗೆ ರಾಮಕೃಷ್ಣ ಹೆಗಡೆ, ಮತ್ತೊಂದು ಅವಧಿಗೆ ಎಸ್.ಆರ್. ಬೊಮ್ಮಾಯಿ ಸಿಎಂ ಆದರು.
ಜನತಾದಳ ಅಧಿಕಾರಕ್ಕೆ: 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಯು.ಕೆ. ಶಾಮಣ್ಣ ಜಯಗಳಿಸಿದರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಈ ಅವಧಿಯಲ್ಲಿ ಎಸ್.  ಬಂಗಾರಪ್ಪ,  ವೀರಪ್ಪ ಮೊಯ್ಲಿ ಸಿಎಂ ಆದರು. 1994ರ ಚುನಾವಣೆಯಲ್ಲಿ ಎಚ್.ಜಿ. ಗೋವಿಂದೇಗೌಡ ಅವರು ಜನತಾದಳದಿಂದ ಸ್ಪರ್ಧೆ ಮಾಡಿ ಜಯಗಳಿಸಿದಾಗ ರಾಜ್ಯದಲ್ಲಿ ಜನತಾದಳ ಅಧಿಕಾರಕ್ಕೆ ಬಂದಿತು. ಆಗ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾದರು. ಬಳಿಕ ಜೆ.ಎಚ್. ಪಟೇಲ್ ಸಿಎಂ ಆದರು.
1999ರಲ್ಲಿ ನಡೆದ ಚುನಾವಣೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಿ.ಬಿ. ಚಂದ್ರೇಗೌಡ ಜಯಗಳಿಸಿದರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾದರು. ಆ ವರ್ಷದಲ್ಲಿ ಡಿ.ಬಿ. ಚಂದ್ರೇಗೌಡ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯವರಾದ ಮೋಟಮ್ಮ ಹಾಗೂ ಸಿ.ಆರ್. ಸಗೀರ್ ಅಹಮದ್ ಸಚಿವರಾಗಿದ್ದರು.
ಅತಂತ್ರ: 2004ರ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಜಯಗಳಿಸಿದರು. ಆದರೆ, ಆಗ ಯಾವುದೇ ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಬಹುಮತ ಇಲ್ಲದೆ ಇದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತು. ಹೊಂದಾಣಿಕೆಯ ಕೊರತೆಯಿಂದ ಸಮ್ಮಿಶ್ರ ಸರ್ಕಾರದ ಕೊಂಡಿ ಕಳಚಿಕೊಂಡಿತು.
ಆಗ ಜೆಡಿಎಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತು. ಎಚ್.ಡಿ. ಕುಮಾರಸ್ವಾಮಿ ಅವರು 2006ರ ಫೆಬ್ರವರಿ 3 ರಿಂದ 2007ರ ಅಕ್ಟೋಬರ್ 8ರವರೆಗೆ ಸಿಎಂ ಆಗಿದ್ದರು. ಇದೇ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಬಳಿಕ ಯಡಿಯೂರಪ್ಪ 7 ದಿನಗಳ ಸಿಎಂ ಆಗಿದ್ದರು. ಅಂದರೆ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸಿದರೂ, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬರಲು ಬಹುಮತದ ಕೊರತೆ ಇತ್ತು. ಆದರೂ ಈ ಅವಧಿಯಲ್ಲಿ ಬಿಜೆಪಿಗೆ ಅಧಿಕಾರದಲ್ಲಿ ಪಾಲುದಾರಿಕೆ ಇತ್ತು.  
2008ರ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಿ.ಎನ್. ಜೀವರಾಜ್ ಗೆಲವು ಸಾಧಿಸಿದರು. ಆಗಲೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಶೃಂಗೇರಿ ಕ್ಷೇತ್ರದಲ್ಲಿ ಗೆದ್ದ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬುದು 6 ದಶಕಗಳಲ್ಲಿ ಸಾಭೀತಾಗಿದೆ. ಈ ಸಂಪ್ರದಾಯ 2013ರ ಚುನಾವಣೆಯಲ್ಲಿ ಮುಂದುವರಿಯಲಿದೆಯೇ ಎಂಬ ಪ್ರಶ್ನೆಗೆ ಮೇ 7 ರಂದು ಉತ್ತರ ಸಿಗಲಿದೆ.
- ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement