21ಕ್ಕೆ ಕಬಡ್ಡಿ ಪಂದ್ಯಾವಳಿ
ಚಿಕ್ಕಮಗಳೂರು: ದಂತ ಸ್ಪೋರ್ಟ್ಸ್ ಯುವ ಅಭಿವೃದ್ಧಿ ಸಂಘದ ವತಿಯಿಂದ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಏ.11ರಂದು ಏರ್ಪಡಿಸಲಾಗಿದ್ದ ಹೊನಲು ಬೆಳಕಿನ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಏಪ್ರಿಲ್ 21 ಕ್ಕೆ ಮುಂದೂಡಲಾಗಿದೆ. ವಿಧಾನಸಭಾ ಚುನಾವಣೆಯ ಕಟ್ಟುಪಾಡಿನ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನು ಮುಂದೂಡಲಾಗಿದ್ದು, ಏ.21ರಂದು ಬೆಳಿಗ್ಗೆ 10 ಗಂಟೆಗೆ ಸ್ಪರ್ಧೆಗಳು ಆರಂಭಗೊಳ್ಳಲಿದೆ ಎಂದು ಸಂಘದ ಕಾರ್ಯದರ್ಶಿ ಎ.ಎಸ್. ಪ್ರಶಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9945534282 ಅಥವಾ 8495911428 ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಿದ್ದಾರೆ.
ಪಿಬಿಎಸ್ ನಿಧನಕ್ಕೆ ಸಂತಾಪ
ನರಸಿಂಹರಾಜಪುರ: ಹಿರಿಯ ಹಿನ್ನೆಲೆ ಗಾಯಕ ಡಾ.ಪಿ.ಬಿ. ಶ್ರೀನಿವಾಸ್ ಅವರ ನಿಧನಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಕ ಪಿ.ಬಿ. ಶ್ರೀನಿವಾಸ್ 9 ಭಾಷೆಗಳಲ್ಲಿ ಹಾಡಿದ್ದರು. ವಿಶೇಷವಾಗಿ ಕನ್ನಡ ಚಲನಚಿತ್ರಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ಕನ್ನಡಿಗರ ಮನೆ ಮಾತಾಗಿದ್ದರು. ವರನಟ ಡಾ.ರಾಜಕುಮಾರ್ ಅವರ ಅಭಿನಯದ ನೂರಾರು ಗೀತೆಗಳಿಗೆ ಧ್ವನಿ ನೀಡಿದ್ದ ಪಿ.ಬಿ. ಶ್ರೀನಿವಾಸ್ ಕಂಠವು ಎಂದೆಂದಿಗೂ ನೆನಪಾಗಿ ಉಳಿಯಲಿದೆ. ಕೆಲವು ವರ್ಷಗಳ ಹಿಂದೆ ಪಿ.ಬಿ. ಶ್ರೀನಿವಾಸ್ ಅವರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದರು ಎಂದು ಶ್ರೀಗಳು ತಮ್ಮ ಸಂತಾಪ ಸಂದೇಶದಲ್ಲಿ ನೆನಪಿಸಿಕೊಂಡಿದ್ದಾರೆ.