ಇ.ಸಿ. ಜೋಯಿ ಕಾಂಗ್ರೆಸ್ ಸೇರ್ಪಡೆ
ಕ.ಪ್ರ.ವಾರ್ತೆ, ನರಸಿಂಹರಾಜಪುರ, ಏ.15
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸುತ್ತಿದ್ದಂತೆ ಪಕ್ಷಾಂತರ ಪರ್ವ ಪ್ರಾರಂಭಗೊಂಡಿದೆ. ಸೋಮವಾರ ಪ್ರಥಮವಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಇ.ಸಿ. ಜೋಯಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರುವುದರೊಂದಿಗೆ ಜೆಡಿಎಸ್‌ಗೆ ಮೊದಲ ಶಾಕ್ ನೀಡಿದ್ದಾರೆ.
ನರಸಿಂಹರಾಜಪುರ ತಾ. ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಕೊಪ್ಪದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ನಾಮಪತ್ರ ಸಲ್ಲಿಸುವ ಮುಂಚೆ ನಡೆದ ಕಾರ್ಯಕರ್ತರ ಸಭೆಯಲ್ಲಿ ನರಸಿಂಹರಾಜಪುರ ತಾಲೂಕು ಜೆಡಿಎಸ್ ಅಧ್ಯಕ್ಷ ಇ.ಸಿ. ಜೋಯಿ, ಜೆಡಿಎಸ್ ಕಸಬಾ ಹೋಬಳಿ ಅಧ್ಯಕ್ಷ ಹಂಚಿನಮನೆ ರಾಘವೇಂದ್ರ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಅವರ ಜೊತೆಗೆ ಜೆಡಿಎಸ್‌ನ ವಿವಿಧ ಘಟಕಗಳ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಬಿಜೆಪಿ ಪಕ್ಷದ ಮುಖಂಡರಾದ ಶಿಜು, ಡಿ. ಸಜು ಸೇರಿದಂತೆ ನೂರಾರು ಬೆಂಬಲಿಗರು ಸಹ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದರು.
ಹೈಕಮಾಂಡ್ ಮೇಲೆ ಆಕ್ರೋಶ: ವಿಧಾನಸಭೆ ಚುನಾವಣೆಗೆ ಕೇವಲ 20 ದಿನ ಇರುವಾಗ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರೊಂದಿಗೆ ರಾಜಿನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಇ.ಸಿ. ಜೋಯಿ ಅವರು 'ಕನ್ನಡಪ್ರಭ'ದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹೀಗೆ.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಅವರನ್ನು ಜೆಡಿಎಸ್ ಹೈಕಮಾಂಡ್ ಗೌರವದ ರೀತಿಯಲ್ಲಿ ನಡೆಸಿಕೊಂಡಿಲ್ಲ. ಎಚ್.ಟಿ. ರಾಜೇಂದ್ರ ಅವರು ಜಿಲ್ಲಾ ಹಾಗೂ ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಶೃಂಗೇರಿ ವಿಧಾನಸಭೆ ಕ್ಷೇತ್ರದ ಚುನಾವಣೆಗೆ ಗೌರವವಾಗಿ ಟಿಕೆಟ್ ನೀಡಬೇಕಾಗಿತ್ತು.
ಸರಿಯಾದ ರೀತಿಯಲ್ಲಿ ಸಂಪನ್ಮೂಲ ಸಹ ನೀಡಬೇಕಾಗಿತ್ತು. ಆದರೆ, ಜೆಡಿಎಸ್ ಪಕ್ಷದ ರಾಜ್ಯ ಮಟ್ಟದ ನಾಯಕರು ಎಚ್.ಟಿ. ರಾಜೇಂದ್ರ ಅವರನ್ನು ಗೌರವದಿಂದ ನಡೆಸಿಕೊಂಡಿಲ್ಲ. ಎಚ್.ಟಿ. ರಾಜೇಂದ್ರ ಅವರ ಮೇಲೆ ಗೌರವ ಇಟ್ಟುಕೊಂಡೇ ಜೆಡಿಎಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದೇವೆ. ಶೃಂಗೇರಿ ಕ್ಷೇತ್ರದ ಬಹುತೇಕ ಜೆಡಿಎಸ್ ನಾಯಕರಿಗೆ, ಕಾರ್ಯಕರ್ತರಿಗೆ ಜೆಡಿಎಸ್ ಮುಖಂಡರ ಮೇಲೆ ಅಸಮಾಧಾನ ಉಂಟಾಗಿದೆ ಎಂದರು.