ಗುಡುಗು ಸಹಿತ ಆಲಿಕಲ್ಲು ಮಳೆ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.15
ನಗರವೂ ಸೇರಿದಂತೆ ಸುತ್ತಮುತ್ತ ಸೋಮವಾರ ಮಧ್ಯಾಹ್ನ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಸಿಡಿಲಿಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಶರವಣ (30) ಮೃತಪಟ್ಟ ವ್ಯಕ್ತಿ.
ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ದಿಢೀರ್ ಮಳೆ ಬಂದಿದೆ. ಚಿಕ್ಕಮಗಳೂರು ತಾಲೂಕಿನ ಹುಕ್ಕುಂದ ಗ್ರಾಮದ ನಿವಾಸಿ ಶರವಣ ಮಳೆ ಬರುವ ವೇಳೆಯಲ್ಲಿ ಗಡಬನಹಳ್ಳಿಯಲ್ಲಿ ಇದ್ದ ಇಟ್ಟಿಗೆಯ ಮೇಲೆ ಟಾರ್ಪಲ್ ಮುಚ್ಚಲು ಹೋಗಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಬಲವಾಗಿ ಬೀಸಿದ ಗಾಳಿಗೆ ಮೂಡಿಗೆರೆ ರಸ್ತೆಯಲ್ಲಿರುವ ಅನ್ನಪೂರ್ಣ ಆಸ್ಪತ್ರೆ ಸಮೀಪದಲ್ಲಿ ಮರಗಳು ಉರುಳಿ ಬಿದ್ದಿದ್ದರಿಂದ ವಿದ್ಯುತ್ ತಂತಿಗಳು ತುಂಡಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 7.20ರವರೆಗೆ ಐ.ಜಿ.ರಸ್ತೆ, ಬಾರ್ ಲೈನ್ ರೋಡ್ ಸೇರಿದಂತೆ ಹಲವೆಡೆ ವಿದ್ಯುತ್ ಕಡಿತವಾಗಿತ್ತು.
ಹಲವೆಡೆ ಜಾಹೀರಾತುಗಳ ಹೋಲ್ಡಿಂಗ್ಗಳು ಕಿತ್ತು ಹೋಗಿದ್ದವು. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಮಳೆಯಿಂದ ತುಂಬಾ ತೊಂದರೆಯಾಯಿತು. ಹೌಸಿಂಗ್ ಬೋರ್ಡ್, ವಿಜಯಪುರ, ಬಸವನಹಳ್ಳಿ, ಕೆಂಪನಹಳ್ಳಿ, ರಾಮನಹಳ್ಳಿ ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ.
--
ಶೋಷಿತರೆಲ್ಲಾ ದಲಿತರು ಎಂದ ಅಂಬೇಡ್ಕರ್
ನರಸಿಂಹರಾಜಪುರ: ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರ ದಲಿತರಾಗುವುದಿಲ್ಲ. ಸಮಾಜದಲ್ಲಿ ಶೋಷಿತ ವರ್ಗದವರಾಗಿರುವ ಪ್ರತಿಯೊಬ್ಬರೂ ದಲಿತರೇ ಎಂಬುದು ಡಾ.ಬಿ.ಆರ್. ಅಂಡೇಡ್ಕರ್ ಅವರ ವಿಚಾರ ಧಾರೆಯಾಗಿತ್ತು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ. ಉಮೇಶ್ ತಿಳಿಸಿದರು.
ಭಾನುವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಕಾರ್ಯ ವಿಭಾಗದಿಂದ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದಕಲು ಬಿಡಿ ಎಂಬ ಧರ್ಮದ ಸಿದ್ಧಾಂತವನ್ನು ಡಾ.ಅಂಬೇಡ್ಕರ್ ಅಳವಡಿಸಿಕೊಂಡಿದ್ದರು ಎಂದರು.
ಉಪನ್ಯಾಸಕ ಸರವಣ್, ಸಮಾಜ ಕಾರ್ಯದ ವಿದ್ಯಾರ್ಥಿಗಳು ತಮ್ಮ ವೃತ್ತಿ ಧರ್ಮವನ್ನು ಅರಿತು ಸಮಾಜದ ಸಮಸ್ಯೆಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಉಪನ್ಯಾಸಕ ಕೆ.ವಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಗೀಸ್, ಮಧು ಇದ್ದರು.