ಜಿಲ್ಲೆಯಲ್ಲಿ 35 ನಾಮಪತ್ರ ಸಲ್ಲಿಕೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.15
ಮೇ 5ರಂದು ನಡೆಯಲಿರುವ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸೋಮವಾರದಂದು 35 ನಾಮಪತ್ರಗಳು ಸಲ್ಲಿಕೆಯಾಗಿವೆ.
ಸಚಿವರಾದ ಸಿ.ಟಿ. ರವಿ, ಡಿ.ಎನ್. ಜೀವರಾಜ್, ಶಾಸಕರಾದ ಡಿ.ಎಸ್. ಸುರೇಶ್, ಎಂ.ಪಿ. ಕುಮಾರಸ್ವಾಮಿ, ಮಾಜಿ ಶಾಸಕರಾದ ಕೆ.ಬಿ. ಮಲ್ಲಿಕಾರ್ಜುನ, ಎಸ್.ಎಲ್. ಧರ್ಮೇಗೌಡ ಸೇರಿದಂತೆ 22 ಮಂದಿ ಒಟ್ಟು 35 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡು 5 ದಿನಗಳು ಕಳೆದಿದ್ದರೂ ನಿರೀಕ್ಷೆಯಂತೆ ನಾಮಪತ್ರಗಳು ಬಂದಿರಲಿಲ್ಲ. ಟಿಕೆಟ್ ಹಂಚಿಕೆಯ ಸ್ಪಷ್ಟ ಚಿತ್ರಣ ಹೊರ ಬರುತ್ತಿದ್ದಂತೆ, ಇನ್ನು ನಾಮಪತ್ರ ಸಲ್ಲಿಕೆಗೆ ಕೇವಲ ಎರಡೇ ದಿನ ಬಾಕಿ ಇರುವುದರಿಂದ ಸೋಮವಾರ ಜಿಲ್ಲೆಯಾದ್ಯಂತ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ತರೀಕೆರೆ ಕ್ಷೇತ್ರದಲ್ಲಿ ಕೆಜೆಪಿ ಪಕ್ಷದಿಂದ ಶಾಸಕ ಡಿ.ಎಸ್. ಸುರೇಶ್, ಪಕ್ಷೇತರರಾಗಿ ಎಚ್.ಎಸ್. ನೀಲಕಂಠಪ್ಪ ನಾಮಪತ್ರ ಸಲ್ಲಿಸಿದರು.
ಮೂಡಿಗೆರೆ ಕ್ಷೇತ್ರದಲ್ಲಿ ಸಿಪಿಐಯಿಂದ ಸಾತಿ ಸುಂದರೇಶ್, ಬಿಜೆಪಿಯಿಂದ ಶಾಸಕ ಎಂ.ಪಿ. ಕುಮಾರಸ್ವಾಮಿ, ಬಿಎಸ್ಪಿಯಿಂದ ಯು.ಬಿ. ಮಂಜಯ್ಯ, ಕಾಂಗ್ರೆಸ್ ಪಕ್ಷದಿಂದ ಬಿ.ಎನ್. ಚಂದ್ರಪ್ಪ ಹಾಗೂ ಪಕ್ಷೇತರರಾಗಿ ನಂಜುಂಡ ನಾಮಪತ್ರ ಸಲ್ಲಿಸಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಡಿ.ಎನ್. ಜೀವರಾಜ್ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದರೆ, ಟಿ.ಡಿ. ರಾಜೇಗೌಡ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಸಿ. ಪ್ರಕಾಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ, ಬಿಜೆಪಿಯಿಂದ ಬೀರೂರು ದೇವರಾಜ್, ಕೆಜೆಪಿಯಿಂದ ಕೆ.ಎಸ್. ಪ್ರಕಾಶ್, ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಕೆ.ಎಂ. ಕೆಂಪರಾಜ್, ಪಕ್ಷೇತರರಾಗಿ ಜಿ.ಕೆ. ಗಿರೀಶ್, ಕೆ.ಆರ್. ಗಂಗಾಧರಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ದತ್ತಪೀಠಕ್ಕೆ ಭೇಟಿ: ಚಿಕ್ಕಮಗಳೂರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸೋಮವಾರದಂದು 6 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ಸಚಿವ ಸಿ.ಟಿ. ರವಿ, ಕಾಂಗ್ರೆಸ್ನಿಂದ ಕೆ.ಎಸ್. ಶಾಂತೇಗೌಡ, ಜೆಡಿಎಸ್ನಿಂದ ಮಾಜಿ ಶಾಸಕ ಧರ್ಮೇಗೌಡ, ಸಿಪಿಐ(ಎಂ.ಎಲ್.)ನಿಂದ ಸುರೇಶ್, ಪಕ್ಷೇತರರಾಗಿ ವಿಜಯಕುಮಾರ್ ಹಾಗೂ ಬಿಜೆಪಿಯ ಹೆಸರಿನಲ್ಲಿ ಚಿಕ್ಕದೇವನೂರಿನ ರವಿ ನಾಮಪತ್ರ ಸಲ್ಲಿಸಿದ್ದಾರೆ.
ಸಚಿವ ಸಿ.ಟಿ. ರವಿ ನಾಮಪತ್ರ ಸಲ್ಲಿಸುವ ಮೊದಲು ಬೆಳಿಗ್ಗೆ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದರು. ಇದೇ ವೇಳೆಯಲ್ಲಿ ಮಾತನಾಡಿದ ಅವರು, ಪ್ರತಿ ಬಾರಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಇಲ್ಲಿಗೆ ಬಂದು ದತ್ತಾತ್ರೇಯಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿ, ವಿಜಯಶಾಲಿಯನ್ನಾಗಿ ಮಾಡುವಂತೆ ಕೇಳಿಕೊಳ್ಳುತ್ತೇನೆ. ಇಲ್ಲಿನ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಇನ್ನಷ್ಟು ಕೆಲಸ ಬಾಕಿ ಇದೆ. ಮುಂದಿನ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ ಹನುಮಂತಪ್ಪ ವೃತ್ತದಲ್ಲಿರುವ ಬಡಮಖಾನ್ ದರ್ಗಾಕ್ಕೆ ಭೇಟಿ ನೀಡಿ, ಬಳಿಕ ಹಳೆ ತಾಲೂಕು ಕಚೇರಿ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಿದರು.
ಇದೇ ವೇಳೆಯಲ್ಲಿ ಮಾಜಿ ಸಚಿವ ಸಿ.ಆರ್. ಸಗೀರ್ ಅಹಮದ್ ಹಾಜರಿದ್ದರು. ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ಧರ್ಮೇಗೌಡ ನಾಮಪತ್ರ ಸಲ್ಲಿಸಿ, ಬಳಿಕ ನಗರದ ಎಂ.ಜಿ. ರಸ್ತೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸುವ ಮೂಲಕ ಮತಯಾಚನೆ ಮಾಡಿದರು.
ಬಿಜೆಪಿಯ ಗೌಪ್ಯ ನಡೆ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಸಿ.ಟಿ. ರವಿ ಬಿಜೆಪಿ ಅಭ್ಯರ್ಥಿ. ಇದು ಎಲ್ಲರಿಗೂ ತಿಳಿದಿರುವ ವಿಷಯ.
ಸಚಿವ ಸಿ.ಟಿ. ರವಿ ಅವರು ನಾಮಪತ್ರ ಸಲ್ಲಿಸಿ ಹೊರಗೆ ನಡೆಯುತ್ತಿದ್ದಂತೆ, ಕಾಂಗ್ರೆಸ್ ಅಭ್ಯರ್ಥಿ ಶಾಂತೇಗೌಡ ನಾಮಪತ್ರ ಸಲ್ಲಿಸಿದರು. ನಂತರದಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಿಕ್ಕದೇವನೂರಿನ ರವಿ ಬಿಜೆಪಿ ಹೆಸರಿನಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಇವರಿಗೆ ಸೂಚಕರಾಗಿ ಚಿಕ್ಕಮಗಳೂರು ತಾಲೂಕು ಪಂಚಾಯ್ತಿ ಅಧ್ಯಕ್ಷ ಬಸವರಾಜ್, ನಟರಾಜ್ ಅವರು ನಾಮಪತ್ರಕ್ಕೆ ಸಹಿ ಹಾಕಿದರು.
ಸಿ.ಟಿ. ರವಿ ಹಾಗೂ ಚಿಕ್ಕದೇವನೂರಿನ ರವಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವುದು ಪಕ್ಷದ ಮುಂದಿನ ರಾಜಕೀಯ ತಂತ್ರಗಾರಿಕೆ ಏನೆಂದು ಅರ್ಥವಾಗುತ್ತಿಲ್ಲ. ಈ ಕುರಿತು ಸುದ್ದಿಗಾರರು, ಚಿಕ್ಕದೇವನೂರು ರವಿ ಅವರನ್ನು ಕೇಳಿದಾಗ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷರ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ಅವರು, ವಾಪಸ್ ಪಡೆಯುವಂತೆ ಸೂಚನೆ ನೀಡಿದರೆ ಹಿಂಪಡೆಯುತ್ತೇನೆ ಎಂದು ಹೇಳಿದರು.