ಬೀರಲಿಂಗೇಶ್ವರ ಜಾತ್ರೆಗೆ ತೆರೆ
ಕ.ಪ್ರ.ವಾರ್ತೆ, ಕಡೂರು, ಏ.16 ಕಳೆದ 39 ವರ್ಷದಿಂದ ಕಾರಣಾಂತರದಿಂದ ಸ್ಥಗಿತವಾಗಿದ್ದ ಕಡೂರು ತಾಲೂಕು ಮತಿಘಟ್ಟದ ಇತಿಹಾಸ ಪ್ರಸಿದ್ಧ ಬಾಳಗಲ್ ಬೀರಲಿಂಗೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆದು ಜಾತ್ರೆಯ ಪ್ರಮುಖ ಘಟ್ಟವಾದ ಹಲ್ಲುಮರಿ ಸೇವೆ ನಡೆಯುವ ಮೂಲಕ ಜಾತ್ರೆಗೆ ತೆರೆಬಿದ್ದಿತು.
ಆರು ದಿನ ನಡೆದ ಜಾತ್ರೆ 12 ಹರಿವಾಣದ ಮತ್ತು 18 ಬಾಳೆ ಹರಿವಾಣದವರು ಸೇರಿ ಗುರು ರೇವಣಸಿದ್ದೇಶ್ವರ ಶ್ರೀಯವರ ಅಪ್ಪಣೆ ಮೇರೆಗೆ ವಕ್ಕಲುಗಳಿಂದ ಧಾರ್ಮಿಕ ವಿಧಿವಿಧಾನದೊಂದಿಗೆ ಮೀಸಲು ಹಾಗೂ ದೇವರ ಹರಕೆ ಕಾಣಿಕೆ ನೀಡುವ ಮೂಲಕ ಬೀರಲಿಂಗೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ ಸಿಕ್ಕಿತ್ತು.
ಪೂಜಾ ಕೈಂಕರ್ಯ: ಸ್ವಾಮಿಯವರಿಗೆ ಸಂಬಂಧಿಸಿದ ಪೂಜಾರರು ಮತ್ತು ವೀರಗಾರರ ಪಟ್ಟ ಹಿಡಿಯುವ ಕಾರ್ಯಕ್ರಮ ನಡೆಯಿತು. ಸಂಜೆ ಸ್ವಾಮಿಯವರ ಮೂಲ ಸ್ಥಾನವಾದ ಬಾಳಗಲ್ ಗುಡ್ಡದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆದು ಸೋಮವಾರ ದೇವರನ್ನು ಮೆರವಣಿಗೆಯಲ್ಲಿ ಹೊಳೆಪೂಜೆಗೆ ಕರೆದೊಯ್ದು, ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ಕಲ್ಲೇಶ್ವರ ಸ್ವಾಮಿಯವರ ಮೂಲ ಸ್ಥಳದಲ್ಲಿ ನಡೆದ ಹೊಳೆಪೂಜೆ ನಂತರ ಪೂಜಾರರು ಮತ್ತು ವೀರಗಾರರಗಳಿಗೆ ಪಟ್ಟಾಭಿಷೇಕ ಮಾಡುವ ಕಾರ್ಯಕ್ರಮ ನಡೆದು ಸಾವಿರಾರು ಭಕ್ತರಿಂದ ಮುಡಿಸೇವೆ ನಡೆಯಿತು. ಸಂಜೆ ಮತಿಘಟ್ಟದಲ್ಲಿ ದೇವರುಗಳ ಅದ್ಧೂರಿ ಉತ್ಸವ ಜರುಗಿ ವಿವಿಧ ಧಾರ್ಮಿಕ ಗುರುಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಮಾರಂಭ ನಡೆಯಿತು.
ಹಲ್ಲುಮರಿ ಪವಾಡ: ಮಂಗಳವಾರ ವೀರಗಾರರಿಂದ ನಡೆಯುವ ಹಲ್ಲುಮರಿ ಪವಾಡ ಊರಿನ ಸಮೀಪದ ಹೊನ್ನಾಳಪ್ಪ ದೇವರ ಸನ್ನಿಧಾನದ ಮುಂದೆ ಗುರುರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಕರಿಯಮ್ಮ, ಬನಶಂಕರಿ, ಲಕ್ಕಮ್ಮ, ಸಂತಮ್ಮ ಮತ್ತು ಅಂತರಘಟ್ಟಮ್ಮ ದೇವರ ಸಮ್ಮುಖದಲ್ಲಿ ನಡೆಯಿತು. ದೂರದ ಊರುಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೀರಗಾರರು ದೇವರ ಮಾರ್ಗದರ್ಶನದಂತೆ ಕುರಿಯನ್ನು ಹಲ್ಲಿನಿಂದ ಸಿಗಿಯುವ ಪವಾಡ ನಡೆಯಿತು.
ಕಡೂರು ತಾಲೂಕಿನ ಮತಿಘಟ್ಟ, ಯಳ್ಳಂಬಳಸೆ, ಮಲ್ಲಾಪುರ, ಸಿಂಗಟಗೆರೆ,ಬೀರೂರು, ಕಡೂರು, ವೈ. ಮಲ್ಲಾಪುರ, ಎಸ್. ಮಾದಾಪುರ, ಬಾಣಾವರ, ಅರಕಲಗೂಡು, ಕೊಂಕನಹಳ್ಳಿ, ಗೊಲ್ಲರಹಳ್ಳಿ, ತರೀಕೆರೆ, ಶಿವಮೊಗ್ಗ, ಮುತ್ತಿಗೆ ಸೇರಿದಂತೆ ಹಲವು ಊರುಗಳಿಂದ ಬಂದ ಭಕ್ತರು ಇತಿಹಾಸ ಪ್ರಸಿದ್ಧ ಜಾತ್ರೆಯಲ್ಲಿ ಭಾಗವಹಿಸಿದ್ದರು.
ದೇವರುಗಳನ್ನು ಬೀಳ್ಕೊಡುವ ಮೂಲಕ ಜಾತ್ರೆ ತೆರೆ ಕಂಡಿತು. ಇದೇ ಸಂದರ್ಭದಲ್ಲಿ ಗುಡಿ ಗೌಡರಾದ ಎಂ.ಜಿ. ಮಹೇಶ್ವರಪ್ಪ, ಖಜಾಂಚಿ ಬಿ.ಎನ್. ನಾಗರಾಜು, ಎಂ.ಪಿ. ಗೋವಿಂದಪ್ಪ, ತಿಮ್ಮೇಗೌಡ, ಮುಖಂಡ ಗುರುಮೂರ್ತಿ, ಟಿ.ಆರ್. ಸತ್ಯನಾರಾಯಣ, ಕುಬೇರಪ್ಪ, ಎಂ.ಎಸ್. ಶ್ರೀನಿವಾಸ್, ಹೇಮಂತ್, ತಮ್ಮಯ್ಯಪ್ಪ ಮೊದಲಾದವರು ಉಪಸ್ಥಿತರಿದ್ದರು.