ವ್ಯಕ್ತಿತ್ವ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.16
ಗುರು, ಶಿಷ್ಯರ ಅವಿನಾಭಾವ ಸಂಬಂಧದಿಂದ ಶಿಕ್ಷಣದ ಗುಣಮೌಲ್ಯ ಹೆಚ್ಚುತ್ತದೆ. ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಟೆಯಿಂದ ಅಧ್ಯಾಪಕ ವೃತ್ತಿಯ ಗೌರವ ಅಧಿಕವಾಗುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.
ಉದ್ಭವ ಪ್ರಕಾಶನ ಸಂಸ್ಥೆ ನಗರದ ಭುವನೇಂದ್ರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಿ. ಮಲ್ಲಾರೆಡ್ಡಿ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿಜ್ಞಾನಿಯ ದೃಷ್ಟಿಯೊಂದಿಗೆ ತತ್ವಜ್ಞಾನಿಯ ಮನಸ್ಸು ಇದ್ದಾಗ ಮಾನವೀಯತೆ ವೃದ್ಧಿಸುತ್ತದೆ. ಅಧ್ಯಯನ ಮತ್ತು ಅಧ್ಯಾಪನ ಸಮಾಜ ತಿದ್ದುವ ಕಾರ್ಯಕ್ಕೆ ಪ್ರಬಲ ಸಾಧನವಾಗಿದೆ. ಗುರುವೇ ಪರಬ್ರಹ್ಮನಾಗುವ ಸಂಸ್ಕೃತಿ ನಮ್ಮದು ಎಂದರು.
ವೈಜ್ಞಾನಿಕ ವಿಚಾರ ಭಿತ್ತಿದರು: ವಿಜ್ಞಾನವನ್ನು ತಮ್ಮ ಮಾತೃಭಾಷೆಯಲ್ಲಿ ಬರೆಯುವುದು ಕಷ್ಟ ಎಂಬುದು ಕೆಲವರ ವಾದ. ಆದರೆ, ಮಲ್ಲಾರೆಡ್ಡಿ ಅವರು ಸರಳವಾಗಿ ಕನ್ನಡದಲ್ಲಿ ವೈಜ್ಞಾನಿಕ ವಿಚಾರಗಳನ್ನು ಬಿತ್ತಿದರು. ಭೇದವೇಣಿಸದೆ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಮನಗೆದ್ದರು ಎಂದರು.
ಸಮಾರಂಭವನ್ನು ಉದ್ಘಾಟಿಸಿದ ವಾಣಿಜ್ಯೋದ್ಯಮಿ ನರೇಂದ್ರ ಪೈ ಮಾತನಾಡಿ, ನಮ್ಮ ಭಾಷೆ, ಸಂಸ್ಕಾರ, ಸಂಸ್ಕೃತಿಯನ್ನು ಉಪೇಕ್ಷಿಸುವಂತಿಲ್ಲ. ಯುವ ಪೀಳಿಗೆಯ ವ್ಯಕ್ತಿತ್ವ ನಿರ್ಮಾಣದಲ್ಲಿ ಮಲ್ಲಾರೆಡ್ಡಿ ಅವರಂತಹ ಅಧ್ಯಾಪಕರ ಪಾತ್ರ ಮಹತ್ವದ್ದು ಎಂದರು.
ಶಿಕ್ಷಣ ಕೇವಲ ಯಾಂತ್ರಿಕವಲ್ಲ, ಬದುಕಿನ ಅರ್ಥವನ್ನು ಜ್ಞಾನದ ವಿಸ್ತಾರವನ್ನು ಹೆಚ್ಚಿಸಬೇಕು. ಭೌತಿಕ ಸಂಪತ್ತಿಗಿಂತ ಬೌದ್ಧಿಕ ಸಂಪತ್ತು ಮಿಗಿಲು ಎಂದು ಹೇಳಿದರು.
ರಾಷ್ಟ್ರ ಪ್ರಶಸ್ತಿಗೆ ಅರ್ಹ ವ್ಯಕ್ತಿ: ಬಸವೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವಲ್ಲಿ ಮಲ್ಲಾರೆಡ್ಡಿ ವಹಿಸಿದ ನಿಸ್ವಾರ್ಥ ಸೇವೆಯಿಂದ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸರ್ಕಾರಿ ವೃತ್ತಿಯಲ್ಲಿ ನಿವೃತ್ತಿ ನಿಯಮಪಾಲನೆ ಸಹಜ. ವೃದ್ಧಾಪ್ಯದಲ್ಲಿ ಮಕ್ಕಳೊಡನೆ ಇರುವುದು ಅನಿವಾರ್ಯ. ಬೀಲ್ಕೊಡುಗೆ ಸಮಾರಂಭ ಅರ್ಥಪೂರ್ಣ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಭ್ರಷ್ಟಾಚಾರಕ್ಕೆ ಪ್ರತಿಯೊಬ್ಬರೂ ಕಾರಣ. ಉತ್ತಮ ಶಿಕ್ಷಣದಿಂದ ಮಾತ್ರ ಜನಜಾಗೃತಿ ಮೂಡಿಸಲು ಸಾಧ್ಯ. ಪ್ರತಿ ಹಂತದಲ್ಲೂ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ. ಮಲ್ಲಾರೆಡ್ಡಿ ಅವರಂತಹ ನಿಸ್ವಾರ್ಥ ಸೇವಾ ಮನೋಭಾವದವರು ವಿರಳ ಎಂದರು.