ಕಣ್ಣು ಹಾಯಿಸಿದತ್ತ ಜನಸಾಗರ: ಸಂಚಾರ ಅಸ್ತವ್ಯಸ್ತ
ಕ.ಪ್ರ ವಾರ್ತೆ, ತರೀಕೆರೆ, ಏ.17
ಒಂದರ ನಂತರ ಮತ್ತೊಂದು ಪಕ್ಷದ ಮೆರವಣಿಗೆ, ಎಲ್ಲ ಮೆರವಣಿಗೆಯಲ್ಲೂ ಬಾವುಟ ಹಿಡಿದ ಸಾವಿರಾರು ಜನರು, ಮೆರವಣಿಗೆ ನಾಲ್ಕು ಕಿ.ಮೀಗೂ ಹೆಚ್ಚು ದೂರ. ಜನರಿಂದಲೇ ತುಂಬಿ ಹೋದ ಬಿ.ಎಚ್.ರಸ್ತೆಯಲ್ಲಿ ಬಹುತೇಕ ಎಲ್ಲಾ ವಾಹನಗಳು ದಿಕ್ಕು ಕಾಣದೆ ಗಂಟೆಗಟ್ಟಲೆ ರಸ್ತೆಯಲ್ಲೇ ನಿಲ್ಲಬೇಕಾಯಿತು.
ವಿಧಾನಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ತರೀಕೆರೆ ಪಟ್ಟಣ ಅಕ್ಷರಶಹ ಜನಸಾಗರದಿಂದ ತುಂಬಿಹೋಗಿತ್ತು. ಉರಿಬಿಸಿಲಿನಲ್ಲೂ ಲೆಕ್ಕವಿಲ್ಲದಷ್ಟು ಪುರುಷರು, ಮಹಿಳೆಯರು, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ನಾಮಪತ್ರ ಸಲ್ಲಿಸುವ ಹಿನ್ಲೆಲೆಯಲ್ಲಿ ಏರ್ಪಾಡಾಗಿದ್ದ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.
ದಿಕ್ಕು ಕಾಣದ ವಾಹನಗಳು: ಜನರಿಂದಲೇ ತುಂಬಿ ಹೋಗಿದ್ದ ರಸ್ತೆಯಲ್ಲಿ, ರಸ್ತೆಯ ಎರಡು ಮುಖಗಳಿಂದ ಆಗಮಿಸಿದ ಪ್ರಯಾಣಿಕರ ವಾಹನ, ಸರಕು ತುಂಬಿದ ವಾಹನ, ಪ್ರಯಾಣಿಕರ ಖಾಸಗಿ ವಾಹನಗಳು, ಮೋಟಾರ್ ಬೈಕ್ ಮತ್ತಿತರ ವಾಹನಗಳು ಮುಂದೆ ಚಲಿಸಲು ದಿಕ್ಕು ಕಾಣದೆ ಗಂಟೆಗಟ್ಟಲೆ ರಸ್ತೆಯಲ್ಲೇ ನಿಧಾನವಾಗಿ ಚಲಿಸಬೇಕಾಯಿತು.
ಇವಿಷ್ಟೇ ಸಾಲದಂಬಂತೆ ಮೆರವಣಿಗೆಗೆ ಇಂಬು ಕೊಡಲು ಪಟಾಕಿಗಳ ಕಿವಿಗಡಚಿಕ್ಕುವ ಶಬ್ಧ.
ಕಾಂಗ್ರೆಸ್ಗೆ ಕಲಾ ತಂಡ: ಪಟ್ಟಣದ ಬನಶಂಕರಿ ದೇವಸ್ಥಾನದಿಂದ ಸಾವಿರಾರು ಜನರೊಡಗೂಡಿ ಪ್ರಾರಂಭವಾದ ಕಾಂಗ್ರೆಸ್ ಮೆರವಣಿಗೆಯಲ್ಲಿ ಪಕ್ಷದ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್ ಅವರ ಮೆರವಣಿಗೆಯಲ್ಲಿ ಉತ್ತರ ಕರ್ನಾಟಕದ ಬೊಂಬೆ ಪ್ರದರ್ಶನ ಎಲ್ಲರನ್ನೂ ಆಕರ್ಷಿಸಿದರೆ, ಕೆಜೆಪಿ ಪಕ್ಷದ ಅಭ್ಯರ್ಥಿ ಡಿ.ಎಸ್. ಸುರೇಶ್ ಅವರ ಮೆರವಣಿಗೆಯಲ್ಲಿ ಬೃಹದಾಕಾರವಾದ ತೆಂಗಿನಕಾಯಿ ಪಕ್ಷದ ಚಿಹ್ನೆ ಮೆರವಣಿಗೆಗೆ ವಿಶೇಷ ಕಳೆ ನೀಡಿತ್ತು.
ಜೆಡಿಎಸ್ ಕೂಡ ಜನಬಲ ಪ್ರದರ್ಶಿಸುವುದರಲ್ಲಿ ಹಿಂದೆ ಬೀಳಲಿಲ್ಲ. ಸಾವಿರಾರು ಜನರೊಡಗೂಡಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಟಿ.ಆರ್. ನಾಗರಾಜ್ ಮೆರವಣಿಗೆಯಲ್ಲಿ ಮಿಂಚಿದರು.
ಎತ್ತಿನಗಾಡಿಯಲ್ಲಿ ಆಗಮನ: ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಡಿ.ಸಿ. ಸುರೇಶ್ ಬೆಂಬಲಿಗರೊಡನೆ ಎತ್ತಿನಗಾಡಿಯಲ್ಲಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಬುಧವಾರ 15 ನಾಮಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಎ. ಸುರೇಶ್ (ಪ), ಬಿ. ತಿಮ್ಮಯ್ಯ,(ಪ) ವಿ. ಜಯರಾಮು (ಪ), ಜಿ.ಎಚ್. ಶ್ರೀನಿವಾಸ್ (ಕಾಂಗ್ರೆಸ್), ಕೆ. ಮಂಜುನಾಥ್ (ಬಿ.ಎಸ್.ಆರ್.ಮತ್ತು ಪ), ಡಿ.ಎಸ್. ಸುರೇಶ್ (ಕೆಜೆಪಿ), ಟಿ.ಆರ್. ನಾಗರಾಜ್ (ಜೆಡಿಎಸ್), ಕಾಂತರಾಜು (ಪ), ಪರಮೇಶ್ನಾಯಕ್ (ಪ), ಡಿ.ಸಿ. ಸುರೇಶ್ (ಸರ್ವೋದಯ ಕರ್ನಾಟಕ ಪಕ್ಷ), ಎಚ್. ಓಂಕಾರಪ್ಪ (ಪ), ಅನುಸೂಯ (ಪ), ಬಿ.ಆರ್. ನೀಲಕಂಠಪ್ಪ(ಪ), ಟಿ.ಎಸ್. ಸುರೇಶ್ (ಪ), ಎಚ್.ಪಿ.ಅಶೋಕ್ (ಪ)
ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಡಿ.ಸಿ. ಸುರೇಶ್ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಡನೆ ಮಾತನಾಡಿ, ಚಳುವಳಿ ಮಾದರಿಯಲ್ಲಿ ಚುನಾನಣೆಗೆ ಸ್ಪರ್ಧಿಸಿದ್ದೇನೆ, ತರೀಕೆರೆ ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ನೇರವಾಗಿ ಭದ್ರಾ ನದಿಯಿಂದ ಶುದ್ಧ ಕುಡಿವ ನೀರು ಸರಬರಾಜಾಗಬೇಕು, ಭದ್ರಾ ಮೇಲ್ದಂಡೆ ಯೋಜನೆಯ ಪಥ ಬದಲಾವಣೆಯಾಗಬೇಕು, ಸುರಂಗ ಮಾರ್ಗ ಕೂಡದು, ತಾಲೂಕಿನಲ್ಲಿ ಆಗಿರುವ ಕಳಪೆ ಕಾಮಗಾರಿ ಗುಣಮಟ್ಟದ್ದಾಗಿ ಪರಿವರ್ತಿಸಬೇಕು ಇತ್ಯಾದಿಗಳ ಈಡೇರಿಕೆಗಾಗಿ ಹೋರಾಟ ಮಾಡಲು ಚುನಾವಣೆಗೆ ಸ್ಪರ್ಧಿಸಲಾಗಿದೆ ಎಂದರು.
ಮುಖಂಡ ವಿನಾಯಕ ಮಳೂರು ದಿನ್ನೆ ಮಾತನಾಡಿದರು. ಹಳೆಯೂರು ಸೋಮಶೇಖರ್, ರಾಜಶೇಖರ್, ಪುಟ್ಟಸ್ವಾಮಿ, ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು.