ಕಾಫಿಯ ತವರಲ್ಲಿ ಹ್ಯಾಟ್ರಿಕ್ ಹೀರೋಗಳು
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.17
ಕಾಫಿಯ ಉದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ 1978ರಲ್ಲಿ ರಾಜಕೀಯದ ಪುನರ್ ಜನ್ಮ ನೀಡುವ ಮೂಲಕ ರಾಜಕೀಯ ರಂಗದಲ್ಲಿ ಎಲ್ಲರ ಗಮನ ಸೆಳೆದಿದೆ.
ಈ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 1952 ರಿಂದ 2008ರವರೆಗೆ ನಡೆದಿರುವ ಚುನಾವಣೆಯ ಫಲಿತಾಂಶ ಪುಟಗಳನ್ನು ತಿರುವಿ ಹಾಕಿದರೆ, ಇಲ್ಲಿ ಕಡಿದಾಳ್ ಮಂಜಪ್ಪ, ಸಿ.ಆರ್. ಸಗೀರ್ ಅಹಮದ್ ಹಾಗೂ ಕೆ.ಎಂ. ಕೃಷ್ಣಮೂರ್ತಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಕಡಿದಾಳ್ ಮಂಜಪ್ಪ: 1952 ರಿಂದ 1983ರವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಇಷ್ಟು ದೀರ್ಘ ಅವಧಿ ಅಧಿಕಾರ ನಡೆಸಿದ ಕಾಂಗ್ರೆಸ್ನಲ್ಲಿ 9 ಮಂದಿ ಮುಖ್ಯಮಂತ್ರಿಯಾಗಿದ್ದರು. ಇವರಲ್ಲಿ ಕಡಿದಾಳ್ ಮಂಜಪ್ಪ ಒಬ್ಬರು. ಕಡಿದಾಳ್ ಮಂಜಪ್ಪ ಅವರು 1952ರಲ್ಲಿ ನಡೆದ ಚುನಾವಣೆಯಲ್ಲಿ ತೀರ್ಥಹಳ್ಳಿ- ಕೊಪ್ಪ ಕ್ಷೇತ್ರದಿಂದ ಸ್ಪರ್ಧೆ ಮಾಡಿ 16570 ಮತಗಳನ್ನು ಪಡೆದು ಜಯಗಳಿಸಿದ್ದರು. ಆ ಅವಧಿಯಲ್ಲಿ ಆಗಸ್ಟ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಅಂದರೆ ಮೂರು ತಿಂಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1957ರಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾದರು. 1962ರಲ್ಲಿ ನಡೆದ ಚುನಾವಣೆಯಲ್ಲಿ ಕಡಿದಾಳ್ ಮಂಜಪ್ಪ ಮತ್ತೆ ಗೆಲವು ಸಾಧಿಸುವುದರ ಮೂಲಕ ಹ್ಯಾಟ್ರಿಕ್ ಹೀರೋ ಪಟ್ಟಿಯಲ್ಲಿ ಸ್ಥಾನ ಪಡೆದರು.
ಸಗೀರ್ ಅಹಮದ್: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 1989ರ ಚುನಾವಣೆಯಲ್ಲಿ ಸಿ.ಆರ್. ಸಗೀರ್ ಅಹಮದ್ ಮೊದಲ ಬಾರಿಗೆ ಜಯಗಳಿಸಿ ವಿಧಾನಸಭೆಯನ್ನು ಪ್ರವೇಶ ಮಾಡಿದರು. ಬಳಿಕ 1994ರಲ್ಲಿ ನಡೆದ ಚುನಾವಣೆಯಲ್ಲೂ ಅವರೇ ಜಯಗಳಿಸಿದರು. 1999ರ ಚುನಾವಣೆಯಲ್ಲಿ ಜಯಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಆಗ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸಗೀರ್ ಅಹಮದ್ ಸಚಿವರಾಗಿದ್ದರು.
ಕೆ.ಎಂ. ಕೃಷ್ಣಮೂರ್ತಿ: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 1994ರಲ್ಲಿ ನಡೆದ ಚುನಾವಣೆಯಲ್ಲಿ ಕೆ.ಎಂ. ಕೃಷ್ಣಮೂರ್ತಿ ಜನತಾದಳದಿಂದ ಸ್ಪರ್ಧೆ ಮಾಡಿ ಜಯಗಳಿಸಿದರು. ಜನತಾದಳ ಪಕ್ಷ, ಸಂಯುಕ್ತ ಜನತಾದಳ ಮತ್ತು ಜಾತ್ಯತೀತ ಜನತಾದಳವನ್ನಾಗಿ ಎರಡು ಪಕ್ಷಗಳಾಗಿ ರೂಪುಗೊಂಡ ಬಳಿಕ ಅಂದರೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಕೆ.ಎಂ. ಕೃಷ್ಣಮೂರ್ತಿ ಅವರು ದೇವೇಗೌಡರ ಬಣದಲ್ಲಿ ಅಂದರೆ ಜಾತ್ಯತೀತ ಜನತಾದಳದಿಂದ ಸ್ಪರ್ಧೆ ಮಾಡಿ ಜಯಗಳಿಸಿದರು.
2004ರಲ್ಲೂ ಅದೇ ಪಕ್ಷದಿಂದ ಸ್ಪರ್ಧೆ ಮಾಡಿದಾಗ ಜಯಗಳಿಸಿದರು. ಅವರು ಸತತವಾಗಿ ಮೂರು ಬಾರಿ ಜಯಗಳಿಸಿದರು. ಅವರ ವಿಜಯಾತ್ರೆ ಅಷ್ಟಕ್ಕೆ ಸೀಮಿತವಾಗಲಿಲ್ಲ. ಸಿದ್ದರಾಮಯ್ಯ ಅವರು ದೇವೇಗೌಡರೊಂದಿಗೆ ಮುನಿಸಿಕೊಂಡು ಹೊರ ಬಂದು ಅಹಿಂದವನ್ನು ಹುಟ್ಟು ಹಾಕಿದಾಗ ಕೆ.ಎಂ. ಕೃಷ್ಣಮೂರ್ತಿ ಅವರು ಸಿದ್ದರಾಮಯ್ಯರೊಂದಿಗೆ ಕಾಂಗ್ರೆಸ್ಗೆ ಬಂದರು. 2008ರ ಚುನಾವಣೆಯಲ್ಲಿ ಕೃಷ್ಣಮೂರ್ತಿ ಅವರು ಮತ್ತೆ ಗೆಲವು ಸಾಧಿಸಿ, ಇಡೀ ಜಿಲ್ಲೆಯಲ್ಲಿ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ ಏಕೈಕ ವ್ಯಕ್ತಿ ಎನಿಸಿಕೊಂಡರು. ಆದರೆ, ಅವರ ಸಚಿವ ಸ್ಥಾನದ ಕನಸು ಕೊನೆಯವರೆಗೂ ನನಸಾಗಲೇ ಇಲ್ಲ.
ಕೆ.ಎಂ. ಕೃಷ್ಣಮೂರ್ತಿ 1994ರಲ್ಲಿ ಮೊದಲ ಬಾರಿಗೆ ಕಡೂರು ಕ್ಷೇತ್ರದಲ್ಲಿ ಜಯಗಳಿಸಿದ ವರ್ಷದಲ್ಲಿ ರಾಜ್ಯದಲ್ಲಿ ಜನತಾದಳ ಅಧಿಕಾರಕ್ಕೆ ಬಂದಿತ್ತು. ಆಗ ಎಚ್.ಡಿ. ದೇವೇಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರದಲ್ಲಿ ಜೆ.ಎಚ್. ಪಟೇಲ್ ಸಿಎಂ ಆಗಿದ್ದರು. ಆಗ ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ.
1999ರ ಚುನಾವಣೆಯಲ್ಲಿ ಕೃಷ್ಣಮೂರ್ತಿ ಅವರು ಜೆಡಿಎಸ್ನಿಂದ ಸ್ಪರ್ಧಿಸಿ ಜಯಗಳಿಸಿದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಆಗ ಸಚಿವ ರಾಗುವ ಆಸೆಯನ್ನು ಕೈ ಬಿಟ್ಟರು. 2004ರ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿಲ್ಲ. ಆಗ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತು. ಅಂದು ಜೆಡಿಎಸ್ ವರಿಷ್ಟರು ಮನಸ್ಸು ಮಾಡಿದ್ದರೆ ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ಸಿಗುವುದು ಕಷ್ಟವಾಗುತ್ತಿರಲಿಲ್ಲ. ಜತೆಗೆ ಸತತವಾಗಿ ಮೂರು ಬಾರಿ ಶಾಸಕರಾಗಿದ್ದ ಅರ್ಹತೆಯೂ ಅವರಿಗಿತ್ತು. ಆದರೆ, ಸಚಿವ ಸ್ಥಾನ ಸಿಗಲಿಲ್ಲ. ಈ ಬೇಸರ ಅವರಲ್ಲಿ ಮನೆ ಮಾಡಿತ್ತು.
ಈ ನಿರಾಶೆಯಿಂದಲೇ ಅವರು ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ಗೆ ಗುಡ್ ಬೈ ಹೇಳಿದರು. ಆದರೆ, ಕಡೂರು ಕ್ಷೇತ್ರದ ಜನರು ಅವರನ್ನು ಕೈಬಿಡಲಿಲ್ಲ. 2008 ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದಾಗಲೂ ಜಯಗಳಿಸಿದರು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಸಚಿವರಾಗುವ ಕನಸು ಕರಗಿ ಹೋಯಿತು. ಅಷ್ಟರಲ್ಲೇ ಅವರು ಅನಾರೋಗ್ಯಕ್ಕೆ ತುತ್ತಾಗಿ 2010ರಲ್ಲಿ ನಿಧನರಾದರು.
ಈ ಮೂವರು ನಾಯಕರ ಸತತ ಗೆಲುವಿನ ಹ್ಯಾಟ್ರಿಕ್ ರೆಕಾರ್ಡ್ ಮುರಿಯಲು ಯಾರಿಂದಲೂ ಈವರೆಗೆ ಜಿಲ್ಲೆಯಲ್ಲಿ ಸಾಧ್ಯವಾಗಿಲ್ಲ.
-ಆರ್. ತಾರಾನಾಥ್