ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶೋಲಾ ಕಾಡಿಗೆ ಬೇಲಿ: ಪರಿಸರಾಸಕ್ತರ ವಿರೋಧ

Lingaraj Badiger
Updated On : 18 Apr 2013, 10:58 am

ಕಪ್ರ ವಾರ್ತೆ, ಚಿಕ್ಕಮಗಳೂರು, ಏ.17
ಚಂದ್ರದ್ರೋಣ ಪರ್ವತ ಶ್ರೇಣಿಯ ಹೊನ್ನಮ್ಮನಹಳ್ಳ ಶೋಲಾ ಕಾಡಿನ ಸುತ್ತ ಅರಣ್ಯ ಇಲಾಖೆಯವರು ಬೇಲಿ ನಿರ್ಮಿಸುತ್ತಿರುವುದನ್ನು ಪರಿಸರಾಸಕ್ತ ಜಿ. ವೀರೇಶ್ ಖಂಡಿಸಿದ್ದಾರೆ.
 ಈ ಪ್ರದೇಶದಲ್ಲಿ ಕಲ್ಲು ಕಂಬಗಳನ್ನು ಶೋಲಾ ಕಾಡಿನ ಸುತ್ತ ಹಾಕಲಾಗಿದೆ. ತಂತಿಯನ್ನು ಬಳಸಿ ಕಾಡಿನ ಸುತ್ತಲು ಬೇಲಿ ಹಾಕುವ ಯೋಜನೆಯನ್ನು ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ಇಲಾಖೆ ಕೈಗೊಂಡಿರುವುದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
 ಇದು, ಹುಲ್ಲುಗಾವಲು ಮತ್ತು ಶೋಲಾ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ವನ್ಯಜೀವಿಗಳು ಮುಕ್ತವಾಗಿ ಸಂಚಾರ ಮಾಡುತ್ತವೆ. ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಬೇಲಿ ನಿರ್ಮಿಸುವ ಯೋಜನೆಯನ್ನು  ಹಾಕಿಕೊಂಡಿರುವುದು ಇಲ್ಲಿನ ವನ್ಯಜೀವಿಗಳ ಮುಕ್ತ ತಿರುಗಾಟಕ್ಕೆ ಧಕ್ಕೆಯುಂಟಾಗುತ್ತದೆ. ಹಾಗೂ ಅವೈಜ್ಞಾನಿಕವಾಗಿ ಈ ರೀತಿ ಅರಣ್ಯಕ್ಕೆ ಬೇಲಿ ನಿರ್ಮಿಸುವುದು ಎಷ್ಟು ಸೂಕ್ತ ಎಂಬುದನ್ನು ಅರಣ್ಯ ಇಲಾಖೆ ಚಿಂತಿಸಬೇಕಾಗಿದೆ. ಏಕಾಏಕಿ ಶೋಲಾ ಅರಣ್ಯಕ್ಕೆ ಬೇಲಿ ನಿರ್ಮಿಸುತ್ತಿರುವುದರ ಉದ್ದೇಶವೆನೆಂದು ಅರಣ್ಯ ಇಲಾಖೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
 ಶೋಲಾ ಅರಣ್ಯ ಪ್ರದೇಶದಲ್ಲಿ ಹೊನ್ನಮ್ಮನಹಳ್ಳ ನೀರು ಉಗಮ ಸ್ಥಳವಾಗಿದ್ದು ಅಲ್ಲಿ ಹಚ್ಚ ಹಸಿರಿನ ಸಸ್ಯ ರಾಶಿ ಕಂಗೊಳಿಸುತ್ತಿದೆ.
 ಬೇಲಿ ಹಾಕುವುದರಿಂದ ಇಲ್ಲಿನ ಕಾಡಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅರಣ್ಯ ಇಲಾಖೆಯ ಬೇಲಿಗೆ ಬೇಟೆಗಾರರು ಉರುಳು ಹಾಕಿ ವನ್ಯಜೀವಿಗಳನ್ನು ಕೊಲ್ಲುವ ಸಾಧ್ಯತೆ ಇರುತ್ತದೆ.   ಅರಣ್ಯ ಇಲಾಖೆ ಕೇವಲ ಯೋಜನಾ ದೃಷ್ಟಿಯಿಂದ ಈ ರೀತಿ ಅವೈಜ್ಞಾನಿಕ ಬೇಲಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬಾರದು. ಈ ಬಗ್ಗೆ ಸಾಧಕ- ಬಾಧಕಗಳನ್ನು ಪರಿಸರ ಪರ ಸಂಘಟನೆಗಳ ಜೊತೆ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
 ಕೂಡಲೇ ಶೋಲಾ ಅರಣ್ಯಕ್ಕೆ ಬೇಲಿ ಹಾಕುವ ಯೋಜನೆಯನ್ನು ಅರಣ್ಯ ಇಲಾಖೆ ನಿಲ್ಲಿಸಬೇಕು. ವನ್ಯ ಜೀವಿಗಳ ಮುಕ್ತ ಸಂಚಾರಕ್ಕೆ ಧಕ್ಕೆ ಉಂಟು ಮಾಡುವ ಈ ಯೋಜನೆಯನ್ನು ಅರಣ್ಯ ಇಲಾಖೆ ಕೈಬಿಡಬೇಕು ಎಂದು  ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement