5 ವರ್ಷ ಸರ್ಕಾರ ನಡೆಸಿದ್ದೇ ಬಿಜೆಪಿ ಸರ್ಕಾರದ ಸಾಧನೆ
ಕಪ್ರ ವಾರ್ತೆ,ಎನ್ಆರ್ ಪುರ, ಏ.18
ಬಿಜೆಪಿ ಸರ್ಕಾರ ಪದೇ ಪದೇ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿ ಆಡಳಿತ ಕುಸಿಯುವಂತೆ ಮಾಡಿದೆ. 5 ವರ್ಷ ಸರ್ಕಾರ ನಡೆಸಿದ್ದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಸದಸ್ಯ ಜಯಪ್ರಕಾಶ ಹೆಗಡೆ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದರು.
ಅವರು ಗುರುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಾಗ 3 ತಿಂಗಳಲ್ಲೇ ರೇಷನ್ ಕಾರ್ಡನ್ನು ಸರಿಪಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ 5 ವರ್ಷ ಆಡಳಿತ ಮುಗಿಸಿದರೂ ಅವರಿಗೆ ಪೂರ್ಣ ಪ್ರಮಾಣದಲ್ಲಿ ಪಡಿತರ ರೇಷನ್ ಕಾರ್ಡ್ನೀಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಅಡಿಕೆ ಹಳದಿ ಎಲೆರೋಗದ ಸಮೀಕ್ಷೆ ಮಾಡಿದ ಡಾ. ಗೋರಕ್ ಸಿಂಗ್ ವರದಿಯ 9 ಸಲಹೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಸಾಲ ಮನ್ನಾ ಮಾಡಬೇಕು ಎಂಬ ವಿಷಯ ಈಗ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ. ಈಗಾಗಲೇ ಈ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್ಸಿಂಗ್, ಕೃಷಿ ಸಚಿವ ಶರದ್ ಪವಾರ್ ಹತ್ತಿರ ಚರ್ಚೆ ನಡೆಸಲಾಗಿದೆ, ದೇಶದೊಳಗೆ ಅಡಿಕೆಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಶೀಘ್ರ ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಗುಂಪುಗಾರಿಕೆ ಮಾಡಿಲ್ಲ: ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಮಾತನಾಡಿ, ಟಿ.ಡಿ. ರಾಜೇಗೌಡರು ಏನು ಸಾಧನೆ ಮಾಡಿದ್ದಾರೆ ಎಂದು ಸಚಿವ ಡಿ.ಎನ್. ಜೀವರಾಜ್ ಪ್ರಶ್ನೆ ಮಾಡಿದ್ದಾರೆ. ನಾನು ಜಿಪಂ ಅಧ್ಯಕ್ಷನಾಗಿದ್ದಾಗ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆಯನ್ನು ನಂ.1 ಸ್ಥಾನಕ್ಕೆ ಏರಿಸಿದ್ದೆ. ಬರಗಾಲ ಬಂದಿದ್ದರೂ ಯಾರಿಗೂ ಕುಡಿವ ನೀರಿನ ತೊಂದರೆ ಬಾರದಂತೆ ನೋಡಿಕೊಂಡಿದ್ದೆ. ನಾನು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸೇಡಿನ ರಾಜಕಾರಣ, ಗುಂಪುಗಾರಿಕೆ ಮಾಡಲಿಲ್ಲ. ಚುನಾವಣೆಯ ನಂತರ ಎಲ್ಲಾ ಪಕ್ಷದವರನ್ನು ಒಂದೇ ರೀತಿ ನೋಡಿಕೊಂಡಿದ್ದೆ. ಇದೇ ನನ್ನ ಸಾಧನೆ ಎಂದು ಜೀವರಾಜ್ಗೆ ಪ್ರತ್ಯುತ್ತರ ನೀಡಿದರು.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಲ್.ಎಂ. ಮೂರ್ತಿ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ 13 ಮುಖಂಡರು ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೂ ಟಿ.ಡಿ. ರಾಜೇಗೌಡರನ್ನು ಹೈಕಮಾಂಡ್ ಆಯ್ಕೆ ಮಾಡಿದಾಗ ಯಾರೂ ಅಸಮಾಧಾನ ವ್ಯಕ್ತಪಡಿಸದೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ನಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಪ್ರಾಮಾಣಿಕ ನಾಯಕರಿದ್ದಾರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಆಳುವುದು ಹೇಗೆ ಎಂದು ತೋರಿಸಿಕೊಡುತ್ತೇವೆ. ಆದರೆ, ಬಿಜೆಪಿ ಕ್ರಿಮಿನಲ್ ಹಿನ್ನೆಲೆ ಇರುವುವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿ ಈಗ ಕ್ರಿಮಿನಲ್ ಕೇಸ್ ಇದ್ದವರಿಗೆ ಟಿಕೆಟ್ ನೀಡುತ್ತಿದೆ ಎಂದು ಬಿಜೆಪಿಯನ್ನು ಟೀಕಿಸಿದರು.
ರಾಜಕಾರಣ ಸೇವೆ: ಬಿಜೆಪಿ ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡಿದೆ. ಆದರೆ, ಕಾಂಗ್ರೆಸ್ ರಾಜಕಾರಣವನ್ನು ಸೇವೆ ಎಂದು ಪರಿಗಣಿಸಿದೆ. ಈಗ ಮತದಾರರು ಧರ್ಮ ರಕ್ಷಣೆಗಾಗಿ ಬಿಜೆಪಿ ಕಿತ್ತು ಹಾಕಿ ಕಾಂಗ್ರೆಸನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ವಹಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್ನ ಮುಖಂಡರಾದ ಟಿ.ವಿ. ರಾಜು, ಸಚಿನ್ ಮೀಗ, ಕೆ.ಎಂ. ಗಂಗಾಧರ್, ಆರ್. ಸದಾಶಿವ, ಲೇಖಾ ವಸಂತ್, ಕೆ.ಎ. ಅಬೂಬಕರ್, ಕೆ.ವಿ. ವಸಂತ್ಕುಮಾರ್, ಚಿಕ್ಕಮಗಳೂರಿನ ರಾಜು ಮುಂತಾದವರಿದ್ದರು. ಶೇವಿಯಾರ್ ಸ್ವಾಗತಿಸಿ, ಬಿ.ಎಸ್. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಕೆ.ಎಂ. ಸುಂದರೇಶ್ ವಂದಿಸಿದರು.